ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಪರಿಣಾಮ ಕುವೈತ್ ಮೇಲೂ ಬೀಳುತ್ತಿದೆ. ಇರಾನ್ ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಕುವೈತ್ ತನ್ನ ವಾಯುಪ್ರದೇಶದಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ದೇಶದ ಪ್ರಮುಖ ಮೂಲಸೌಕರ್ಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಕಾರಣ ಜನರಲ್ಲಿ ಆತಂಕ ಮನೆಮಾಡಿದೆ.
ಕುವೈತ್ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಸೌದ್ ಅಬ್ದುಲಜೀಜ್ ಅಲ್-ಒಟೈಬಿ ಮಾಹಿತಿ ನೀಡಿದ್ದು, ಇರಾನ್‌ನಿಂದ ಉಡಾಯಿಸಲಾದ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಕುವೈತ್ ವಾಯುಪಡೆ ಯಶಸ್ವಿಯಾಗಿ ತಡೆದು ಹೊಡೆದುರುಳಿಸಿದೆ ಎಂದು ತಿಳಿಸಿದ್ದಾರೆ. ಇಂದು ಬೆಳಗಿನ ಜಾವದಿಂದಲೇ ದೇಶದ ವಾಯುಪ್ರದೇಶವನ್ನು ಗುರಿಯಾಗಿಸಿಕೊಂಡು ಹಲವು ದಾಳಿಗಳು ನಡೆದಿದ್ದು, ಭದ್ರತಾ ಪಡೆಗಳು ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿವೆ ಎಂದರು.
ಆದರೆ ಕೆಲವು ದಾಳಿಗಳಿಂದ ವಿದ್ಯುತ್ ಹಾಗೂ ನೀರು ಪೂರೈಕೆ ಇಲಾಖೆಯ ವ್ಯಾಪ್ತಿಯಲ್ಲಿರುವ ಪ್ರಮುಖ ಸೌಲಭ್ಯಗಳಿಗೆ ಹಾನಿಯಾಗಿದೆ. ಇದರಿಂದ ದೇಶದಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅಮೆರಿಕ ಕೂಡ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಮೆರಿಕ ಸೇನೆಯ ಸೆಂಟ್ಕಾಮ್ ಇರಾನ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಸತತ ಒಂಬತ್ತನೇ ರಾತ್ರಿಯೂ ವೈಮಾನಿಕ ದಾಳಿಗಳನ್ನು ಮುಂದುವರಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಇರಾನ್ ಬಳಸುತ್ತಿದ್ದ ಡ್ರೋನ್ ಹಾಗೂ ಕ್ಷಿಪಣಿ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೆಂಟ್ಕಾಮ್ ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಮೃತಪಟ್ಟ ಮೂವರು ಅಮೆರಿಕದ ಸೈನಿಕರ ಗೌರವಾರ್ಥವಾಗಿ ಇರಾನ್ ವಿರುದ್ಧ ಅತ್ಯಂತ ತೀವ್ರ ಹಾಗೂ ಪರಿಣಾಮಕಾರಿ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಕುವೈತ್‌ನ ನೀರಿನ ಭದ್ರತೆಗೂ ಗಂಭೀರ ಸವಾಲು ಎದುರಾಗಿದೆ. ದೇಶದ ಶೇ.90ಕ್ಕೂ ಹೆಚ್ಚು ಕುಡಿಯುವ ನೀರು ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸುವ ಡೆಸಾಲಿನೇಷನ್ ಘಟಕಗಳ ಮೂಲಕವೇ ಪೂರೈಕೆಯಾಗುತ್ತದೆ. ಇರಾನ್ ಈ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದರಿಂದ ದೇಶದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗುವ ಭೀತಿ ಎದುರಾಗಿದೆ.
ಈ ನಡುವೆ ಅಮೆರಿಕ ಮತ್ತು ಇರಾನ್ ನಡುವೆ ಹಿಂದೆ ಜಾರಿಯಲ್ಲಿದ್ದ ತಾತ್ಕಾಲಿಕ ಕದನ ವಿರಾಮ ಕೊನೆಗೊಂಡಿದ್ದು, ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ನೌಕಾಪಡೆಗೆ ಕುವೈತ್ ಬೆಂಬಲ ನೀಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇರಾನ್ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಜಾಗತಿಕ ಸಮುದಾಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
