ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ: ಜೋರ್ಡಾನ್ ದೇಶದ ಮೇಲೆ ಭೀಕರ ದಾಳಿ

ಕೃಷ್ಣ (3)

ಟೆಹ್ರಾನ್ (ಜುಲೈ 17): ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ನಡುವೆ, ಜೋರ್ಡಾನ್‌ನಲ್ಲಿರುವ ಅಮೆರಿಕದ ಅಲ್-ಅಜ್ರಾಕ್ ವಾಯುನೆಲೆ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಈ ದಾಳಿಯಲ್ಲಿ ಅಮೆರಿಕದ ಹಲವು ಯುದ್ಧ ವಿಮಾನಗಳು, ಟ್ಯಾಂಕರ್ ವಿಮಾನಗಳು ಹಾಗೂ ಡ್ರೋನ್‌ಗಳಿಗೆ ಗಂಭೀರ ಹಾನಿಯಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.

ಇರಾನ್‌ನ ಹೇಳಿಕೆಯ ಪ್ರಕಾರ, ಅಮೆರಿಕದ F-16 ಮತ್ತು F-35 ಯುದ್ಧ ವಿಮಾನಗಳು ಸೇರಿದಂತೆ ಹಲವು ಸೇನಾ ಉಪಕರಣಗಳು ನಾಶವಾಗಿವೆ ಅಥವಾ ತೀವ್ರ ಹಾನಿಗೊಳಗಾಗಿವೆ. ಅಲ್ಲದೆ, ಅಮೆರಿಕದ ಸಿಬ್ಬಂದಿಗೂ ಸಾವುನೋವು ಸಂಭವಿಸಿದ್ದು, ವಾಯುನೆಲೆಯ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿಸಿದೆ.

ಆದರೆ, ಈ ಎಲ್ಲ ಹೇಳಿಕೆಗಳನ್ನು ಅಮೆರಿಕ ಅಥವಾ ಜೋರ್ಡಾನ್ ಸರ್ಕಾರಗಳು ಇದುವರೆಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಜೋರ್ಡಾನ್ ತನ್ನ ವಾಯುಪ್ರದೇಶ ಪ್ರವೇಶಿಸಿದ ಕೆಲವು ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆ ಮೂಲಕ ತಡೆದಿರುವುದಾಗಿ ಹೇಳಿದ್ದರೂ, ವಾಯುನೆಲೆಗೆ ಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಇರಾನ್ ಹೇಳುವಂತೆ, ದಕ್ಷಿಣ ಇರಾನ್‌ನ ಮಿಲಿಟರಿ ಹಾಗೂ ಮೂಲಸೌಕರ್ಯ ಗುರಿಗಳ ಮೇಲೆ ಅಮೆರಿಕ ನಡೆಸಿದ ಇತ್ತೀಚಿನ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅಮೆರಿಕ ಇರಾನ್ ಮೇಲೆ ನಡೆಸಿದ ದಾಳಿಗಳಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು ಎಂದು ವರದಿಗಳು ತಿಳಿಸಿದೆ.

ಜೋರ್ಡಾನ್ ನಲ್ಲಿರೋ ಅಮೆರಿಕ ವಾಯು ನೆಲೆಗೆ ಇರಾನಿನ 3 ಕ್ಷಿಪಣಿಗಳು ಅಪ್ಪಳಿಸಿದೆ ಎಂದು ವರದಿಗಳು ತಿಳಿಸಿದೆ. ಅಮೆರಿಕ ವಾಯು ಪಡೆಗೆ ಆಘಾತ ಕೊಟ್ಟಿದ್ದೇವೆ. ಇಸ್ಲಾಮಿಕ್ ವಿರೋಧಿ ಅಮೆರಿಕನ್ನರ ಮೇಲೆ ನಾವು ಕ್ಷಿಪಣಿಗಳ ಮೂಲಕ ದಾಳಿ ದಅಳಿ ನಡೆಸಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಇದೇ ವೇಳೆ, ಅಮೆರಿಕ ಇಸ್ಲಾಮಿಕ್ ಗಣರಾಜ್ಯದ ಮೂಲಸೌಕರ್ಯಗಳ ಮೇಲೆ ದಾಳಿ ಮುಂದುವರಿಸಿದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲ ಸೇನಾ ನೆಲೆಗಳು ಮತ್ತು ಸೌಲಭ್ಯಗಳು ಕಾನೂನುಬದ್ಧ ಗುರಿಗಳಾಗಲಿವೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಲ್-ಅಜ್ರಾಕ್ ವಾಯುನೆಲೆಯ ಸಮೀಪ ಸ್ಫೋಟಗಳು ಸಂಭವಿಸಿದಂತೆ ಕಾಣುವ ಕೆಲವು ವಿಡಿಯೊಗಳು ವೈರಲ್ ಆಗಿವೆ.

ಈ ಬೆಳವಣಿಗೆಗಳು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಯಾವ ಕ್ಷಣದಲ್ಲಾದರೂ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗುತ್ತಿದೆ.

Exit mobile version