ಇಂಡೋನೇಷ್ಯಾದಲ್ಲಿ ಭೀಕರ ರೈಲು ಅಪಘಾತ: 14 ಸಾ*ವು, 84 ಮಂದಿಗೆ ಗಾಯ

Untitled design 2026 04 28T100525.494

ಜಕಾರ್ತ (ಏ.28): ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಹೊರವಲಯದ ಬೆಕಾಸಿಯಲ್ಲಿ ಸೋಮವಾರ ತಡರಾತ್ರಿ  ಭೀಕರ ರೈಲು ಅಪಘಾತ ಸಂಭವಿಸಿದೆ. ಎರಡು ರೈಲುಗಳ ನಡುವಿನ ಡಿಕ್ಕಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ ಸುಮಾರು 84 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹೇಗೆ ಸಂಭವಿಸಿತು ಈ ದುರಂತ?

ವರದಿಗಳ ಪ್ರಕಾರ, ಒಂದು ಸ್ಥಳೀಯ ಕಮ್ಯುಟರ್ ರೈಲು ಹಳಿಯ ಮೇಲೆ ಬಂದಿದ್ದ ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ಪರಿಣಾಮ ಕಮ್ಯುಟರ್ ರೈಲು ನಿಲ್ಲದೇ, ಹಳಿ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಮುಂದೆ ಚಲಿಸಿದೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ದೂರದೂರಿನ ರೈಲು (Long-distance train) ಕಮ್ಯುಟರ್ ರೈಲಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಮಹಿಳೆಯರ ಬೋಗಿ ಸಂಪೂರ್ಣ ನಜ್ಜುಗುಜ್ಜು

ಈ ಅಪಘಾತದ ವೇಳೆ ಕಮ್ಯುಟರ್ ರೈಲಿನ ಮಹಿಳೆಯರಿಗಾಗಿ ಮೀಸಲಾಗಿದ್ದ ಬೋಗಿಯು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಬೆಂಡಾಗಿ, ಇನ್ನೊಂದು ರೈಲಿನ ಬೋಗಿಯೊಳಗೆ ಸಿಲುಕಿಕೊಂಡಿದೆ. ರೈಲಿನ ಬೋಗಿಯಲ್ಲಿ ಸಾವುನೋವು ಸಂಭವಿಸಿವೆ. ಕಬ್ಬಿಣದ ಚೌಕಟ್ಟುಗಳೆಲ್ಲವೂ ಸಂಪೂರ್ಣವಾಗಿ ತಿರುಚಿಕೊಂಡಿವೆ.

ರಕ್ಷಣಾ ಕಾರ್ಯಾಚರಣೆ

ರೈಲ್ವೆ ಸಂಸ್ಥೆ PT KAI ನ ಮುಖ್ಯಸ್ಥ ಬಾಬಿ ರಶೀದಿ ಅವರು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ತಿಳಿಸಿದ್ದಾರೆ. “ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿದ್ದಾರೆ. ಗ್ಯಾಸ್ ಕಟರ್ ಮೂಲಕ ಬೋಗಿಗಳನ್ನು ಕತ್ತರಿಸಿ ಅವರನ್ನು ಹೊರತೆಗೆಯಲಾಗುತ್ತಿದೆ,” ಎಂದು ಅವರು ವಿವರಿಸಿದರು.

ಇಂಡೋನೇಷ್ಯಾದ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಸ್ಯಾಫಿ ಮಾತನಾಡಿ, “ಕೆಲವು ಸಂತ್ರಸ್ತರು ಇನ್ನೂ ಬದುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಹೊರತೆಗೆಯಲು ತಾಂತ್ರಿಕ ಕೌಶಲ್ಯ ಹೆಚ್ಚಿನ ಅಗತ್ಯವಿದೆ. ಪ್ರತಿ ನಿಮಿಷವೂ ಅಮೂಲ್ಯವಾಗಿದೆ,” ಎಂದಿದ್ದಾರೆ.

ಅಧ್ಯಕ್ಷರ ಭೇಟಿ ಮತ್ತು ಪ್ರತಿಕ್ರಿಯೆ

ಅಪಘಾತದ ದುರಂತವನ್ನು ಗಂಭೀರವಾಗಿ ಪರಿಗಣಿಸಿದ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೋ ಸುಬಿಯಾಂಟೊ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಈ ಪ್ರದೇಶದಲ್ಲಿ ರೈಲು ದಾಟುವ ಸಮಯದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಹಳಿಗಳ ಸಮೀಪ ಮೇಲ್ಸೇತುವೆ (ಫ್ಲೈಓವರ್) ನಿರ್ಮಿಸಲು ತಕ್ಷಣ ನಿರ್ಧರಿಸಲಾಗಿದೆ. ಇದರಿಂದ ಮುಂದೆ ಇಂತಹ ದುರ್ಘಟನೆಗಳನ್ನು ತಪ್ಪಿಸಬಹುದು,” ಎಂದು ತಿಳಿಸಿದರು.

 ತನಿಖೆಗೆ ಮೊರೆ

ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ (KNKT) ಈಗಾಗಲೇ ಅಪಘಾತದ ಕಾರಣಗಳ ಕುರಿತು ತನಿಖೆ ಆರಂಭಿಸಿದೆ. ಅಪಘಾತಕ್ಕೆ ಕಾರಣವಾದ ಟ್ಯಾಕ್ಸಿ ‘ಗ್ರೀನ್ ಎಸ್‌ಎಂ ಇಂಡೋನೇಷ್ಯಾ’ ಸಂಸ್ಥೆಗೆ ಸೇರಿದ್ದಾಗಿದ್ದು, ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಸಂಸ್ಥೆ ತಿಳಿಸಿದೆ.

ಈ ದುರಂತದ ಹಿನ್ನೆಲೆಯಲ್ಲಿ ಜಕಾರ್ತಾದ ಹಲವಾರು ರೈಲು ಸಂಚಾರಗಳನ್ನು ರದ್ದುಗೊಳಿಸಲಾಗಿದೆ ಅಥವಾ ಕಡಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ಬಸ್ ಸೇವೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಆಡಳಿತ ಯಂತ್ರ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ನಿರೀಕ್ಷೆಯಿದೆ.

Exit mobile version