ಭಾರತೀಯ ಪೈಲಟ್ ಸ್ಮಿತ್ ಮಚ್ಚರ್‌ಗೆ ಇಸ್ರೇಲ್ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ನೆತನ್ಯಾಹು ಆಹ್ವಾನ

Untitled design 2026 10 04T121053.471

ಟೆಲ್ ಅವಿವ್: ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್‌ನಿಂದ ಅಪರೂಪದ ಗೌರವ ದೊರೆತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಶ್ಲಾಘಿಸಿದ್ದು, 2027ರ ಮೇ ತಿಂಗಳಲ್ಲಿ ನಡೆಯಲಿರುವ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ವಿಶೇಷವಾಗಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.

ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಗೌರವವನ್ನು ಸಾಮಾನ್ಯವಾಗಿ ಇಸ್ರೇಲಿ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಆದರೆ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಪರಿಗಣಿಸಿ ಈ ಅಪರೂಪದ ಗೌರವವನ್ನು ಭಾರತೀಯರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಲು ಆಹ್ವಾನ ನೀಡಿರುವುದು ವಿಶೇಷ ಗಮನ ಸೆಳೆದಿದೆ.

ಆಸ್ಪತ್ರೆಯಿಂದಲೇ ನೆತನ್ಯಾಹುಗೆ ಮಾತು

ವಿಮಾನದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರೊಂದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಸ್ಮಿತ್ ಅವರ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನೆತನ್ಯಾಹು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಭಾರತ ಮತ್ತು ಇಸ್ರೇಲ್‌ನ ಧೈರ್ಯಶಾಲಿ ಜನರ ನಿಜವಾದ ಹೀರೋ ಸ್ಮಿತ್ ಮಚ್ಚರ್ ಎಂದು ನೆತನ್ಯಾಹು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಇಡೀ ಜಗತ್ತಿನ ಹೀರೋ ಕೂಡ ಅವರೇ ಎಂದು ಕೊಂಡಾಡಿದ್ದಾರೆ. ಈ ದೂರವಾಣಿ ಸಂಭಾಷಣೆಯ ವಿಡಿಯೋವನ್ನು ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿದೆ.

ಕಾಕ್‌ಪಿಟ್‌ನಲ್ಲೇ ನಡೆದ ಭೀಕರ ದಾಳಿ

ಫ್ಲೈದುಬೈ ವಿಮಾನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರೊಂದಿಗೆ ಸಹ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹಮಾಮ್ ಅಲ್ಹಮಾಮಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ದಾಳಿ ನಡೆಸಲು ಯೋಜಿಸಲಾಗಿತ್ತು ಎಂಬ ಆರೋಪದ ಹಿನ್ನೆಲೆ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಯುಎಇ, ಸೌದಿ ಅರೇಬಿಯಾ ಮತ್ತು ಇಸ್ರೇಲ್‌ನ ತನಿಖಾ ಸಂಸ್ಥೆಗಳು ಪ್ರಕರಣದ ವಿವಿಧ ಆಯಾಮಗಳ ಕುರಿತು ವಿಚಾರಣೆ ನಡೆಸುತ್ತಿವೆ.

ತನಿಖೆಯ ಪ್ರಕಾರ, ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಅವರೊಂದಿಗೆ ಸಹ ಪೈಲಟ್ ಸಾಮಾನ್ಯವಾಗಿಯೇ ವರ್ತಿಸಿದ್ದ ಎನ್ನಲಾಗಿದೆ. ಕೆಲ ನಿಮಿಷಗಳ ಕಾಲ ಪ್ರಾರ್ಥನೆ ಮಾಡಲು ಅವಕಾಶ ನೀಡುವಂತೆ ಸ್ಮಿತ್ ಅವರ ಬಳಿ ಆತ ಮನವಿ ಮಾಡಿದ್ದ ಎಂದು ವರದಿಯಾಗಿದೆ.

ಪ್ರಾರ್ಥನೆ ನೆಪದಲ್ಲಿ ದಾಳಿ ಆರೋಪ

ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಸ್ಮಿತ್ ಹಿಂದೆ ತಿರುಗಿ ನೋಡದೆ ಗೌರವ ತೋರಿಸಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಕೆಲವೇ ನಿಮಿಷಗಳ ಬಳಿಕ ಅವರ ಮೇಲೆ ಭೀಕರ ದಾಳಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಾಕ್‌ಪಿಟ್‌ನಲ್ಲಿದ್ದ ಕ್ರ್ಯಾಶ್ ಆಕ್ಸ್‌ನಿಂದ ಸ್ಮಿತ್ ಅವರ ತಲೆಯ ಹಿಂಭಾಗಕ್ಕೆ ಹೊಡೆದಿರುವುದಾಗಿ ವರದಿಯಾಗಿದೆ.

ದಾಳಿಯಿಂದ ಗಾಯಗೊಂಡ ಸ್ಮಿತ್ ಕಾಕ್‌ಪಿಟ್ ಬಾಗಿಲು ತೆರೆದು ಸಹಾಯಕ್ಕಾಗಿ ಕೂಗಿದ್ದಾರೆ. ಇದನ್ನು ಗಮನಿಸಿದ ಮಹಿಳಾ ಪ್ರಯಾಣಿಕರೊಬ್ಬರು ತಕ್ಷಣ ಕಾಕ್‌ಪಿಟ್ ಕಡೆಗೆ ಧಾವಿಸಿ, ಇತರ ಪ್ರಯಾಣಿಕರಿಗೆ ಸಹಾಯಕ್ಕಾಗಿ ಕರೆ ನೀಡಿದ್ದಾರೆ.

ಪ್ರಯಾಣಿಕರ ಸಮಯಪ್ರಜ್ಞೆಯಿಂದ ಪಾರು

ಮುಂಭಾಗದ ಸೀಟುಗಳಲ್ಲಿದ್ದ ಹಲವು ಇಸ್ರೇಲಿ ಪ್ರಯಾಣಿಕರು ತಕ್ಷಣ ಕಾಕ್‌ಪಿಟ್‌ಗೆ ಧಾವಿಸಿ ದಾಳಿ ನಡೆಸುತ್ತಿದ್ದ ಸಹ ಪೈಲಟ್‌ನನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಅನುಭವಿ ಟ್ರಕ್ ಚಾಲಕರೊಬ್ಬರು ವಿಮಾನದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಕ್ಯಾಪ್ಟನ್ ಸ್ಮಿತ್ ಅವರ ಧೈರ್ಯದಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಭಾರತೀಯ ಪೈಲಟ್‌ಗೆ ಜಾಗತಿಕ ಗೌರವ

ಈ ಘಟನೆ ಬಳಿಕ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ನೂರಾರು ಪ್ರಯಾಣಿಕರ ಜೀವ ಉಳಿಸುವಲ್ಲಿ ಅವರ ಧೈರ್ಯ ಮತ್ತು ಸಮಯಪ್ರಜ್ಞೆ ಪ್ರಮುಖ ಪಾತ್ರ ವಹಿಸಿದೆ ಎಂಬ ಕಾರಣಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ವಿಶೇಷ ಗೌರವ ನೀಡಿದ್ದಾರೆ.

 

Exit mobile version