ಅಮೆರಿಕ (ಜುಲೈ 15): ಅಮೆರಿಕದ ಯೂಟಾ ರಾಜ್ಯದ ವೆಸ್ಟ್ ವ್ಯಾಲಿ ಸಿಟಿಯ ವ್ಯಾಲಿ ಫೇರ್ ಮಾಲ್‌ನಲ್ಲಿ ಭಾರತೀಯ ಮೂಲದ ಮುಸ್ಲಿಂ ಉದ್ಯೋಗಿಯೊಬ್ಬರ ಮೇಲೆ ಜನಾಂಗೀಯ ಹಾಗೂ ಧಾರ್ಮಿಕ ದ್ವೇಷದ ಹಿನ್ನೆಲೆ ಚಾಕು ಇರಿದು ದಾಳಿ ನಡೆಸಿರುವ ಘಟನೆ ಆತಂಕ ಮೂಡಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಸೊಹೈಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರ ಮಾಹಿತಿ ಪ್ರಕಾರ, 48 ವರ್ಷದ ಪೀಟರ್ ಮೈಕೇಲ್ ಲಾರ್ಸೆನ್ ಎಂಬಾತ ಮೊದಲು ಅಂಗಡಿಗೆ ಬಂದು ಕುಡಿಯಲು ನೀರು ಕೇಳಿದ್ದಾನೆ. ಈ ವೇಳೆ ಸೊಹೈಲ್ ಅವರೊಂದಿಗೆ ಮಾತುಕತೆ ನಡೆಸಿದ ಆರೋಪಿ, ಅವರು ಎಲ್ಲಿಂದ ಬಂದಿದ್ದಾರೆ ಎಂದು ಪ್ರಶ್ನಿಸಿದ್ದಾನೆ. ಸೊಹೈಲ್ ಅವರು ತಾವು ಭಾರತದವರು ಎಂದು ಹೇಳಿದ ಬಳಿಕ, “ನೀವು ಮುಸ್ಲಿಮಾ?” ಎಂದು ಕೇಳಿದ್ದಾನೆ. ಸೊಹೈಲ್ “ಹೌದು” ಎಂದು ಉತ್ತರಿಸಿದ ತಕ್ಷಣ, ನೀರಿನ ಬಾಟಲಿ ತೆಗೆದುಕೊಳ್ಳಲು ತಿರುಗಿದ ಕ್ಷಣದಲ್ಲೇ ಆರೋಪಿ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಸೊಹೈಲ್ ಅವರನ್ನು ರಕ್ಷಿಸಲು ಪಕ್ಕದ ಅಂಗಡಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣವೇ ಮಧ್ಯಪ್ರವೇಶಿಸಿದರು. ಆರೋಪಿಯ ಮೇಲೆ ಕುರ್ಚಿ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ದಾಳಿ ನಿಲ್ಲಿಸಲು ಪ್ರಯತ್ನಿಸಿದರು. ಬಳಿಕ ಹಲವರು ಸೇರಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಈ ದಾಳಿಯಲ್ಲಿ ಸೊಹೈಲ್ ಅವರ ದೇಹಕ್ಕೆ ಸುಮಾರು 15 ಬಾರಿ ಚಾಕು ಇರಿಯಲಾಗಿದೆ. ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿ ತನಿಖೆ ವೇಳೆ ತಾನು ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೊಲೆ ಯತ್ನ, ಮಾರಕಾಸ್ತ್ರ ಬಳಕೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಸಾಲ್ಟ್ ಲೇಕ್ ಕೌಂಟಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಈ ಘಟನೆ ಅಮೆರಿಕದಲ್ಲಿ ದ್ವೇಷಾಪರಾಧಗಳ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಭಾರತೀಯ ಸಮುದಾಯದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ.
