ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌, ಪತ್ನಿ ಬುಶ್ರಾ ಬೀಬಿಗೆ 17 ವರ್ಷ ಜೈಲು..!

Untitled design (29)

ಇಸ್ಲಾಮಾಬಾದ್: ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ‘ತೋಷಖಾನಾ-2’ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ ಹಾಗೂ ಆತನ ಪತ್ನಿ ಬುಶ್ರಾ ಬೀಬಿಗೆ ವಿಶೇಷ ನ್ಯಾಯಾಲಯವು ಶನಿವಾರ ತಲಾ 17 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸುವಂತೆ ತೀರ್ಪು ನೀಡಿದೆ.

ಏನಿದು ತೋಷಖಾನಾ-2 ಪ್ರಕರಣ?

ಈ ಪ್ರಕರಣವು ಮೇ 2021 ರಲ್ಲಿ ಇಮ್ರಾನ್ ಖಾನ್ ದಂಪತಿ ಅಧಿಕೃತ ವಿದೇಶಿ ಪ್ರವಾಸದಲ್ಲಿದ್ದಾಗ ನಡೆದ ಘಟನೆಯನ್ನು ಆಧರಿಸಿದೆ. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿಗೆ ಅತ್ಯಂತ ದುಬಾರಿ ‘ಬಲ್ಗರಿ’ (Bulgari) ಆಭರಣದ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ನಿಯಮದ ಪ್ರಕಾರ ವಿದೇಶಿ ಗಣ್ಯರು ನೀಡುವ ಉಡುಗೊರೆಗಳನ್ನು ಸರ್ಕಾರಿ ಖಜಾನೆ ಅಥವಾ ‘ತೋಷಖಾನಾ’ಕ್ಕೆ ಒಪ್ಪಿಸಬೇಕು. ಆದರೆ, ಈ ದಂಪತಿಗಳು ಆಭರಣದ ಮೌಲ್ಯವನ್ನು ಅತ್ಯಂತ ಕಡಿಮೆ ಎಂದು ತೋರಿಸಿ, ಸರ್ಕಾರಕ್ಕೆ ಅಲ್ಪ ಹಣ ಪಾವತಿಸಿ ತಾವೇ ಇಟ್ಟುಕೊಂಡಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಿದೆ.

ಇಮ್ರಾನ್ ಖಾನ್ ಪ್ರಸ್ತುತ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಭದ್ರತಾ ಕಾರಣಗಳಿಂದಾಗಿ ವಿಶೇಷ ನ್ಯಾಯಾಧೀಶರಾದ ಶಾರುಖ್ ಅರ್ಜುಮಂಡ್ ಅವರು ಜೈಲಿನಲ್ಲಿಯೇ ವಿಚಾರಣೆ ನಡೆಸಿ ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದಾರೆ.

ಶಿಕ್ಷೆಯ ವಿವರ:

ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 ರ ಅಡಿಯಲ್ಲಿ (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ) ಇಬ್ಬರಿಗೂ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಹೆಚ್ಚುವರಿ 7 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಒಟ್ಟಾರೆಯಾಗಿ ದಂಪತಿಗಳು 17 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಈಗಾಗಲೇ ಹಲವು ಪ್ರಕರಣಗಳಲ್ಲಿ ಶಿಕ್ಷೆ ಎದುರಿಸುತ್ತಿರುವ 71 ವರ್ಷದ ಇಮ್ರಾನ್ ಖಾನ್ ಅವರಿಗೆ ಈ ತೀರ್ಪು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಮತ್ತು ಮೊದಲ ತೋಷಖಾನಾ ಪ್ರಕರಣದ ಬಳಿಕ ಇದು ಅವರಿಗೆ ಸಿಗುತ್ತಿರುವ ದೊಡ್ಡ ಶಿಕ್ಷೆಯಾಗಿದೆ. ಇತ್ತ ಪತ್ನಿ ಬುಶ್ರಾ ಬೀಬಿ ಕೂಡ ಈ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವುದು ಪಿಟಿಐ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಬೆನ್ನಲ್ಲೇ ಈ ತೀರ್ಪು ಬಂದಿರುವುದು ಇಮ್ರಾನ್ ಖಾನ್ ಅವರ ರಾಜಕೀಯ ಭವಿಷ್ಯದ ಮೇಲೆ ಕಪ್ಪು ನೆರಳು ಬೀಳುವ ಸಾಧ್ಯತೆ ಇದೆ.

Exit mobile version