ಆಕಾಶದಲ್ಲೇ ಡಿಕ್ಕಿಯಾದ ಅಗ್ನಿಶಾಮಕ ಹೆಲಿಕಾಪ್ಟರ್‌ಗಳು; ಇಬ್ಬರು ಸಾ*ವು

Untitled design (27)

ಅಥೆನ್ಸ್, (ಆಗಸ್ಟ್‌ 3): ಗ್ರೀಸ್‌ನಲ್ಲಿ ವ್ಯಾಪಕವಾಗಿ ಹರಡಿರುವ ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆಯ ವೇಳೆ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಅಥೆನ್ಸ್‌ನ ಪಶ್ಚಿಮ ಭಾಗದಲ್ಲಿರುವ ಪೋರ್ಟೊ ಜೆರ್ಮೆನೊ ಸಮೀಪದ ಪ್ಸಾಥಾ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಎರಡು ಅಗ್ನಿಶಾಮಕ ಹೆಲಿಕಾಪ್ಟರ್‌ಗಳು ಆಕಾಶದಲ್ಲೇ ಮುಖಾಮುಖಿ ಡಿಕ್ಕಿಯಾಗಿವೆ.

ಮಾಹಿತಿಯ ಪ್ರಕಾರ, ‘ಬೆಲ್’ ಮಾದರಿಯ ಎರಡು ಹೆಲಿಕಾಪ್ಟರ್‌ಗಳು ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಾ ಕಾಡ್ಗಿಚ್ಚಿನ ಮೇಲೆ ನೀರು ಸುರಿಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಒಂದು ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡು ನೆಲಕ್ಕೆ ಅಪ್ಪಳಿಸಿದರೆ, ಮತ್ತೊಂದು ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡುವ ಮೂಲಕ ಮತ್ತಷ್ಟು ಅನಾಹುತ ತಪ್ಪಿಸಿದೆ.

ಅಪಘಾತದಲ್ಲಿ ಮೊದಲ ಹೆಲಿಕಾಪ್ಟರ್‌ನಲ್ಲಿದ್ದ ಗ್ರೀಕ್ ಮೂಲದ ಅಗ್ನಿಶಾಮಕ ಅಧಿಕಾರಿ ಹಾಗೂ ಡೆನ್ಮಾರ್ಕ್ ಮೂಲದ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎರಡನೇ ಹೆಲಿಕಾಪ್ಟರ್‌ನಲ್ಲಿದ್ದ ಬ್ರಿಟನ್ ಮೂಲದ ಪೈಲಟ್ ಮತ್ತು ಗ್ರೀಕ್ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ.

ಪ್ರಸ್ತುತ ಗ್ರೀಸ್‌ನಲ್ಲಿ ಗಂಟೆಗೆ 100 ಕಿಲೋಮೀಟರ್ ವೇಗದ ಬಿರುಗಾಳಿ ಹಾಗೂ ತೀವ್ರ ಬಿಸಿಲಿನ ಪರಿಣಾಮ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ವೇಗವಾಗಿ ಹರಡುತ್ತಿದೆ. ದಟ್ಟ ಹೊಗೆಯಿಂದ ರಸ್ತೆ ಮಾರ್ಗಗಳು ಮುಚ್ಚಲ್ಪಟ್ಟಿರುವುದರಿಂದ ಕರಾವಳಿ ಗ್ರಾಮಗಳ ನೂರಾರು ನಿವಾಸಿಗಳನ್ನು ನೌಕೆಗಳು ಮತ್ತು ಬೋಟ್‌ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್, ಪರಿಸ್ಥಿತಿ ಮಾನವ ನಿಯಂತ್ರಣ ಮೀರಿದ ವಿಕೋಪದ ರೂಪ ಪಡೆದುಕೊಂಡಿದೆ ಎಂದು ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದ ಅವರು, ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿದಿವೆ ಎಂದು ತಿಳಿಸಿದ್ದಾರೆ.

ಗ್ರೀಸ್ ಮಾತ್ರವಲ್ಲದೆ ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಲ್ಲೂ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ವ್ಯಾಪಿಸಿದ್ದು, ಸಾವಿರಾರು ನಿವಾಸಿಗಳು ಹಾಗೂ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಐರೋಪ್ಯ ಒಕ್ಕೂಟದ (EU) ತುರ್ತು ಸಹಕಾರ ಯೋಜನೆಯಡಿ ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಮತ್ತು ರೊಮೇನಿಯಾ ದೇಶಗಳು ಗ್ರೀಸ್‌ಗೆ ಅಗ್ನಿಶಾಮಕ ವೈಮಾನಿಕ ನೆರವು ಒದಗಿಸುತ್ತಿವೆ.

2018ರಲ್ಲಿ ಗ್ರೀಸ್‌ನ ಮಾತಿ ಪ್ರದೇಶದಲ್ಲಿ ಸಂಭವಿಸಿದ್ದ ಭೀಕರ ಕಾಡ್ಗಿಚ್ಚಿನಲ್ಲಿ 104 ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೆ ಅದೇ ರೀತಿಯ ದುರಂತ ಸಂಭವಿಸುವ ಆತಂಕ ಎದುರಾಗಿದೆ.

Exit mobile version