ಲಿಮಾ (ಪೆರು) (ಆಗಸ್ಟ್ 02): ದಕ್ಷಿಣ ಅಮೆರಿಕದ ಪೆರು ದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ನಾಜ್ಕಾ ಲೈನ್ಸ್ (Nazca Lines) ಸಮೀಪ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 11 ವಿದೇಶಿ ಪ್ರವಾಸಿಗರು ಸೇರಿದಂತೆ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿದೆ. ಯುನೆಸ್ಕೋ ವಿಶ್ವ ಪರಂಪರೆ ತಾಣವನ್ನು ವೀಕ್ಷಿಸಲು ತೆರಳಿದ್ದ ಪ್ರವಾಸಿಗರನ್ನು ಹೊತ್ತಿದ್ದ ಸಣ್ಣ ವಿಮಾನ ಪತನಗೊಂಡು ಬೆಂಕಿಗಾಹುತಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯ ಪ್ರವಾಸಿ ಸಂಸ್ಥೆ ಏರೋಡಿಯಾನಾ (Aerodiana) ಗೆ ಸೇರಿದ ಸೆಸ್ನಾ 208 ಕ್ಯಾರವಾನ್ (Cessna 208 Caravan) ವಿಮಾನವು ಪಿಸ್ಕೋ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗಿ ನಾಜ್ಕಾ ಲೈನ್ಸ್ ವೀಕ್ಷಣಾ ಹಾರಾಟ ನಡೆಸುತ್ತಿತ್ತು. ಬಳಿಕ ನಾಜ್ಕಾ ವಿಮಾನ ನಿಲ್ದಾಣಕ್ಕೆ ಇಳಿಯಲು ಕೆಲವೇ ಕಿಲೋಮೀಟರ್‌ಗಳು ಬಾಕಿ ಇರುವಾಗ ವಿಮಾನದ ಸಂಪರ್ಕ ನಿಯಂತ್ರಣ ಕೊಠಡಿಯೊಂದಿಗೆ ಕಡಿತಗೊಂಡಿತು.
ಸ್ವಲ್ಪ ಸಮಯದ ಬಳಿಕ ನಾಜ್ಕಾ ನಗರದ ಹೊರವಲಯದ ಪ್ಯೂಬ್ಲೊ ವಿಯೆಜೊ ಪ್ರದೇಶದಲ್ಲಿ ವಿಮಾನ ಪತನಗೊಂಡಿತು. ನೆಲಕ್ಕೆ ಅಪ್ಪಳಿಸಿದ ತಕ್ಷಣ ಭಾರೀ ಸ್ಫೋಟ ಸಂಭವಿಸಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ವಿಮಾನದಲ್ಲಿದ್ದ ಯಾರೂ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಪೊಲೀಸ್ ಅಧಿಕಾರಿ ಜಾರ್ಜ್ ಆಂಡ್ರಾಡೆ ಅವರ ಪ್ರಕಾರ, ವಿಮಾನದಲ್ಲಿದ್ದ 11 ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದುವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದವರ ಶೋಧ ಕಾರ್ಯ ಮುಂದುವರಿದಿದೆ.
ಮೃತರಲ್ಲಿ ಇಟಲಿಯ ಏಳು, ಜರ್ಮನಿಯ ಇಬ್ಬರು ಹಾಗೂ ಸ್ಪೇನ್‌ನ ಇಬ್ಬರು ನಾಗರಿಕರು ಸೇರಿದ್ದಾರೆ ಎಂದು ಪೆರುವಿನ ವಿದೇಶಾಂಗ ಹಾಗೂ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ. ಇಬ್ಬರು ಪೆರು ಮೂಲದ ಪೈಲಟ್ ಮತ್ತು ಸಹ ಪೈಲಟ್ ಕೂಡ ದುರಂತದಲ್ಲಿ ಮೃತಪಟ್ಟಿದ್ದಾರೆ.
ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ದುರಂತಕ್ಕೂ ಒಂದು ದಿನ ಮುನ್ನ ಈ ಪ್ರದೇಶದಲ್ಲಿ ಭಾರೀ ಧೂಳಿನ ಬಿರುಗಾಳಿ (Sandstorm) ಬೀಸಿದ್ದರಿಂದ ಹವಾಮಾನವೂ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಜೊತೆಗೆ ತಾಂತ್ರಿಕ ದೋಷದ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪೆರು ಸರ್ಕಾರ, ನಾಗರಿಕ ವಿಮಾನಯಾನ ಪ್ರಾಧಿಕಾರದ ಮೂಲಕ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ತನಿಖಾ ತಂಡಗಳು ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುತ್ತಿದ್ದು, ವಿಮಾನದ ಬ್ಲಾಕ್ ಬಾಕ್ಸ್ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಪಿಸ್ಕೋ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ.
