ಜಾಗತಿಕ ತಂತ್ರಜ್ಞಾನ ಲೋಕದ ದಿಗ್ಗಜ, ಗೂಗಲ್‌ನ ಮಾಜಿ ಸಿಇಒ ಎರಿಕ್ ಸ್ಮಿತ್ ಈಗ ತಮ್ಮ ವೃತ್ತಿಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 70 ವರ್ಷದ ಈ ಬಿಲಿಯನೇರ್, ತಮಗಿಂತ 43 ವರ್ಷ ಕಿರಿಯರಾದ 27 ವರ್ಷದ ಜರ್ಮನ್ ಮಾಡೆಲ್ ಗ್ಲೋರಿಯಾ-ಸೋಫಿ ಬರ್ಕಂಡ್ಟ್ ಅವರೊಂದಿಗೆ ಕಾಣಿಸಿಕೊಂಡಿರುವುದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕಳೆದ ತಿಂಗಳು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ‘ವಿಶ್ವ ಆರ್ಥಿಕ ವೇದಿಕೆ’ಯ (World Economic Forum) ಸಭೆಯಲ್ಲಿ ಎರಿಕ್ ಸ್ಮಿತ್ ಮತ್ತು ಗ್ಲೋರಿಯಾ-ಸೋಫಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಜರ್ಮನ್ ಮಾಧ್ಯಮ ಸಂಸ್ಥೆ ‘ಬಿಲ್ಡ್’ ವರದಿಯ ಪ್ರಕಾರ, ಈ ಜೋಡಿ ಅಲ್ಲಿ ಅತ್ಯಂತ ಆಪ್ತವಾಗಿ ಕಾಲ ಕಳೆದಿದ್ದು, ಇದು ಕೇವಲ ಸ್ನೇಹವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಗ್ಲೋರಿಯಾ ಅವರು ಬವೇರಿಯನ್ ಸಚಿವ-ಅಧ್ಯಕ್ಷ ಮಾರ್ಕಸ್ ಸೋಡರ್ ಅವರ ಪುತ್ರಿಯಾಗಿದ್ದಾರೆ.
ಯಾರು ಈ ಗ್ಲೋರಿಯಾ-ಸೋಫಿ?
ಗ್ಲೋರಿಯಾ ಕೇವಲ ಗ್ಲಾಮರ್ ಪ್ರಪಂಚದ ಮಾಡೆಲ್ ಮಾತ್ರವಲ್ಲ, ಅವರು ಅದ್ಭುತ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಅವರು ವ್ಯವಹಾರ ನಿರ್ವಹಣೆ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂತರಾಷ್ಟ್ರೀಯ ಮಟ್ಟದ ‘ವೋಗ್’ ಮ್ಯಾಗಜಿನ್‌ಗಳಲ್ಲಿ ಮಿಂಚಿರುವ ಇವರು, ವೃತ್ತಿಜೀವನದ ಆರಂಭದಲ್ಲಿ ತಾನು ಎದುರಿಸಿದ ಸವಾಲುಗಳ ಬಗ್ಗೆಯೂ ಲೇಖನಗಳನ್ನು ಬರೆದಿದ್ದಾರೆ.
ಈ ಕುರಿತು ಎರಿಕ್ ಸ್ಮಿತ್ ಅವರ ಆಪ್ತ ಮೂಲಗಳು ಪ್ರತಿಕ್ರಿಯಿಸಿದ್ದು, ಗ್ಲೋರಿಯಾ ದಾವೋಸ್‌ನಲ್ಲಿ ಎರಿಕ್ ಅವರ ಪರಿವಾರದ ಭಾಗವಾಗಿದ್ದರು. ಇಬ್ಬರ ನಡುವೆ ಇರುವುದು ಕೇವಲ ಸ್ನೇಹ ಮಾತ್ರ, ಬೇರೇನೂ ಇಲ್ಲ ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿವೆ. ಆದರೆ, ಜರ್ಮನ್ ಮಾಧ್ಯಮಗಳು ಮಾತ್ರ ಬರ್ಕಂಡ್ ಅವರು ಸ್ಮಿತ್‌ಗೆ ಸ್ನೇಹಿತೆಗಿಂತ ಹೆಚ್ಚಿನವರು ಎಂದು ವರದಿ ಮಾಡಿವೆ.
ಎರಿಕ್ ಸ್ಮಿತ್ ಅವರ ಈ ಹಿಂದಿನ ಸಂಬಂಧಗಳು:
ಎರಿಕ್ ಸ್ಮಿತ್ ಅವರು ವೆಂಡಿ ಸ್ಮಿತ್ ಅವರನ್ನು ವಿವಾಹವಾಗಿ ನಾಲ್ಕು ದಶಕಗಳೇ ಕಳೆದಿವೆ. ಆದರೆ, ಸ್ಮಿತ್ ತಮ್ಮ ಪತ್ನಿಯಿಂದ ಬೇರೆಯಾಗದಿದ್ದರೂ, ಅನೇಕ ಬಾರಿ ನ್ಯೂಯಾರ್ಕ್‌ನ ಉನ್ನತ ವಲಯಗಳಲ್ಲಿ ಕಿರಿಯ ವಯಸ್ಸಿನ ಮಹಿಳೆಯರೊಂದಿಗೆ ಕಾಣಿಸಿಕೊಂಡ ಉದಾಹರಣೆಗಳಿವೆ. ಹಿಂದೆ ಮಾಜಿ ಒಲಿಂಪಿಕ್ ಫಿಗರ್ ಸ್ಕೇಟರ್ ಅಲೆಕ್ಸಾಂಡ್ರಾ ಡ್ಯೂಸ್‌ಬರ್ಗ್ ಅವರೊಂದಿಗೂ ಇವರ ಹೆಸರು ಕೇಳಿಬಂದಿತ್ತು.
2011ರಲ್ಲಿ ಗೂಗಲ್ ಸಿಇಒ ಹುದ್ದೆಯಿಂದ ಕೆಳಗಿಳಿದ ಎರಿಕ್ ಸ್ಮಿತ್, ಸದ್ಯ ಸುಮಾರು $54.6 ಬಿಲಿಯನ್ (ಬ್ಲೂಮ್‌ಬರ್ಗ್ ವರದಿ) ಆಸ್ತಿಯ ಒಡೆಯರಾಗಿದ್ದಾರೆ. ತಂತ್ರಜ್ಞಾನ ಮತ್ತು ಸಾಮಾಜಿಕ ಸೇವೆಗಳಲ್ಲಿ ಇಂದಿಗೂ ಸಕ್ರಿಯರಾಗಿರುವ ಇವರು ಸದ್ಯ ಈ ಮೂಲಕ ಮತ್ತೆ ಜಗತ್ತಿನ ಗಮನ ಸೆಳೆದಿದೆ.
