ಉಡುಪಿ ಶಾಲಾ ಮಕ್ಕಳಿಗೆ ಶೌಚಾಲಯ ಕಟ್ಟಿದ ವಿದೇಶಿಗರು

Web (31)

ವಿದೇಶದಿಂದ ಭಾರತಕ್ಕೆ ಆಗಮಿಸಿದವರು ತಮ್ಮ ಉತ್ತಮ ನಡವಳಿಕೆ ಮತ್ತು ಒಳ್ಳೆಯ ಕಾರ್ಯಗಳಿಂದ ಸುದ್ದಿಯಾಗುತ್ತಾರೆ. ಇದೀಗ, ಇಂಟರ್ನ್‌ಶಿಪ್‌ಗಾಗಿ ದೂರದ ದೇಶದಿಂದ ಬಂದ ವಿದೇಶಿಯರು, ಉಡುಪಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ಬೆರೆತು, ಅವರ ಅಗತ್ಯಗಳಿಗೆ ಸ್ಪಂದಿಸಿ, ತಮ್ಮ ಹೃದಯ ಶ್ರೀಮಂತಿಕೆಯನ್ನು ತೋರಿದ್ದಾರೆ. ಈ ವಿದೇಶಿಯರು ಯಾವ ಕೆಲಸವನ್ನು ಮಾಡಿದರು? ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದೇಶಿಯರು ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಇಲ್ಲಿನ ರುಚಿಕರ ಆಹಾರವನ್ನು ಆನಂದಿಸುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಕೆಲವರು ಭಾರತದಲ್ಲೇ ನೆಲೆಸಿ, ಈ ದೇಶವನ್ನು ತಮ್ಮದೇ ದೇಶವೆಂದು ಭಾವಿಸುವ ಮನೋಭಾವ ಬೆಳೆಸಿಕೊಂಡಿದ್ದಾರೆ. ಈ ರೀತಿಯಲ್ಲಿ ವಿದೇಶದಿಂದ ಬಂದವರು ಒಳ್ಳೆಯ ಕಾರ್ಯಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಕೆಲವರು ಭಾರತೀಯರಿಗೆ ಸ್ವಚ್ಛತೆಯ ಕುರಿತು ಪಾಠ ಮಾಡಿದರೆ, ಇನ್ನು ಕೆಲವರು ತಪ್ಪುಗಳನ್ನು ಸರಿಪಡಿಸಿ, ಬುದ್ಧಿವಾದ ಹೇಳುವ ಕೆಲಸವನ್ನು ಮಾಡುತ್ತಾರೆ.

ಆದರೆ ಇದೀಗ, ಉಡುಪಿಯ ಬೈಂದೂರು ವಲಯದ ಕನ್ಯಾನ ಗ್ರಾಮದ ಕೂಡ್ಲು ಸರಕಾರಿ ಶಾಲೆಗೆ ಇಂಟರ್ನ್‌ಶಿಪ್‌ಗಾಗಿ ಆಗಮಿಸಿದ ವಿದೇಶಿಯರು, ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಎರಡು ತಿಂಗಳ ಕಾಲ ಕಳೆದಿದ್ದಾರೆ. ಈ ಅವಧಿಯಲ್ಲಿ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದ್ದಾರೆ. ತಮ್ಮ ಇಂಟರ್ನ್‌ಶಿಪ್ ಮುಗಿದು ತೆರಳುವ ಮುನ್ನ, ಶಾಲಾ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾದ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಕಾರ್ಯಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋವನ್ನು elkaani ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ ಇವರು ದೂರದ ದೇಶದಿಂದ ಇಂಟರ್ನ್‌ಶಿಪ್‌ಗಾಗಿ ಆಗಮಿಸಿದವರೆಂದು ಉಲ್ಲೇಖಿಸಲಾಗಿದೆ. ಬೈಂದೂರು ವಲಯದ ಗ್ರಾಮೀಣ ಪ್ರದೇಶದ ಕನ್ಯಾನ ಗ್ರಾಮದ ಕೂಡ್ಲು ಸರಕಾರಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಎರಡು ತಿಂಗಳ ಕಾಲ ಆಟ-ಪಾಠಗಳಲ್ಲಿ ಭಾಗವಹಿಸಿದ ಈ ಫ್ರಾನ್ಸ್ ದೇಶದ ನಾಗರಿಕರು, ವಿದ್ಯಾರ್ಥಿಗಳ ಅಗತ್ಯವನ್ನು ಗಮನಿಸಿ, ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ.

ವಿಶೇಷವೆಂದರೆ, ಇವರು ಕೇವಲ ಹಣ ನೀಡಿ ಶೌಚಾಲಯವನ್ನು ನಿರ್ಮಿಸಲಿಲ್ಲ. ಬದಲಿಗೆ, ಶೌಚಾಲಯದ ಗುಂಡಿಯನ್ನು ತೆಗೆಯುವುದರಿಂದ ಹಿಡಿದು, ಗೋಡೆಗಳನ್ನು ಕಟ್ಟಿ, ಮೇಲ್ಛಾವಣಿಯನ್ನು ನಿರ್ಮಿಸುವವರೆಗೆ ಸ್ವತಃ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ವಿಡಿಯೋದಲ್ಲಿ, ವಿದೇಶಿಯರು ಶಾಲಾ ವಿದ್ಯಾರ್ಥಿಗಳೊಂದಿಗೆ ಬೆರೆಯುವುದನ್ನು ಮತ್ತು ಶೌಚಾಲಯ ನಿರ್ಮಾಣದ ಕೆಲಸದಲ್ಲಿ ತೊಡಗಿರುವುದನ್ನು ಕಾಣಬಹುದು.

ಈ ವಿಡಿಯೋ 10,000ಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ರೀತಿಯಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, “ಇದು ಸಿವಿಲ್ ಇಂಜಿನಿಯರಿಂಗ್‌ನ ಉದಾಹರಣೆ” ಎಂದು ಬರೆದಿದ್ದಾರೆ. ಇನ್ನೊಬ್ಬರು, “ನಿಮ್ಮ ಕೆಲಸಕ್ಕೆ ಮೆಚ್ಚುಗೆ, ಇದು ಅದ್ಭುತ” ಎಂದಿದ್ದಾರೆ. ಮತ್ತೊಬ್ಬರು, “ವಿದೇಶಿಯರು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ. ಕೆಲವರು ಚಪ್ಪಾಳೆ ತಟ್ಟುವ ಚಿಹ್ನೆಯನ್ನು ಕಳುಹಿಸಿ, ಈ ಕಾರ್ಯಕ್ಕೆ ತಮ್ಮ ಮೆಚ್ಚುಗೆಯನ್ನು ತೋರಿದ್ದಾರೆ.

 

Exit mobile version