ದುಬೈ: ಫ್ಲೈದುಬೈ ವಿಮಾನವನ್ನು ಹೈಜಾಕ್ ಮಾಡಿ ಪತನಗೊಳಿಸಲು ಯತ್ನಿಸಿದ ಘಟನೆಯನ್ನು ಉಗ್ರ ಸಂಘಟನೆ ಅಲ್ ಖೈದಾ ಶ್ಲಾಘಿಸಿದೆ. ಇಸ್ರೇಲ್ ಮತ್ತು ಅಮೆರಿಕನ್ನರು ಸಂಚರಿಸುವ ವಿಮಾನಗಳ ಮೇಲೆ ಇದೇ ರೀತಿಯ ದಾಳಿಗೆ ಅಲ್ ಖೈದಾ ಕರೆ ನೀಡಿದ್ದು, “ದುಷ್ಟ ಅಮೆರಿಕ ಅಂತ್ಯವಾಗಲಿದೆ” ಎಂದು ಸಂದೇಶ ರವಾನಿಸಿದೆ. ಅರೇಬಿಕ್ ಭಾಷೆಯ ಲೇಖನದಲ್ಲಿ ಈ ದಾಳಿಗೆ ಕರೆ ನೀಡಲಾಗಿದೆ.
ಅಲ್ ಖೈದಾ ನಂಟಿರುವ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಈ ಸಂದೇಶ ಹರಡಿದ ಬಳಿಕ ಡಿಲೀಟ್ ಮಾಡಲಾಗಿದೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅಲ್-ಖೈದಾ ಪರ ಬೆಂಬಲಿಗರು ಜುಲೈನಲ್ಲಿ ಆರಂಭಿಸಿದ ‘ಅಲ್-ಬಯಾನ್’ ಎಂಬ ಸಾಪ್ತಾಹಿಕ ಪ್ರಕಟಣೆಯ ಸಂಚಿಕೆಯಲ್ಲಿ ಈ ಕರೆ ನೀಡಿರುವುದು ಕಂಡುಬಂದಿದೆ. ಈ ಪ್ರಕಟಣೆಯನ್ನು ತೆಗೆದುಹಾಕುವ ಮೊದಲು, ಅದನ್ನು ಆ ಗುಂಪಿನ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.
ಉಗ್ರ ಸಂಘಟನೆಯ ಸಂದೇಶದಲ್ಲಿ ಏನಿದೆ?
“ಯುದ್ಧ ಇನ್ನೂ ಮುಗಿದಿಲ್ಲ. ಇಸ್ಲಾಂ ವಿರುದ್ಧ ಹೋರಾಡುತ್ತಿರುವ ಯಹೂದಿಗಳು, ಅಮೆರಿಕನ್ನರನ್ನು ಹೊತ್ತ ವಿಮಾನಗಳು ಆಕಾಶದಲ್ಲಿ ಹಾರಾಡುತ್ತಿರುತ್ತವೆ. 9/11, ಸೆಪ್ಟೆಂಬರ್ 30ರ ಮಾದರಿ ಆ ವಿಮಾನಗಳನ್ನು ಗುರಿಯಾಗಿಸಬಹುದು. ಅಮೆರಿಕ, ಯಹೂದಿಗಳು ಈಗ ಮೊದಲಿಗಿಂತ ಹೆಚ್ಚು ಶತ್ರುಗಳನ್ನು ಹೊಂದಿದ್ದಾರೆ. ದೇವರಲ್ಲಿ ನಂಬಿಕೆಯಿಲ್ಲದ ವ್ಯಕ್ತಿಯೊಬ್ಬ ಅವರನ್ನು ಗುರಿಯಾಗಿಸಬಹುದು. ಇಂತಹ ಕಾರ್ಯಾಚರಣೆಯಿಂದ ಅಂತಿಮವಾಗಿ ಇಸ್ಲಾಂಗೆ ಪ್ರಯೋಜನವಾಗಬಹುದು. ದುಷ್ಟ ಅಮೆರಿಕ ಸಾಮ್ರಾಜ್ಯ ಅಂತ್ಯಗೊಳ್ಳುವ ದಿನ ಬಂದೇ ಬರುತ್ತದೆ” ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕ ಮೇಲೆ ನಡೆದ 9/11 ಮಾದರಿ ದಾಳಿಯನ್ನು ಇಸ್ರೇಲ್ ಮೇಲೆ ಮಾಡುವಂತೆಯೂ ಈ ಸಂದೇಶದಲ್ಲಿ ಸೂಚನೆ ನೀಡಲಾಗಿದೆ. ವಿಶ್ವ ವ್ಯಾಪಾರ ಕೇಂದ್ರ (WTC) ದಾಳಿಯ ಫೋಟೋದೊಂದಿಗೆ ತನ್ನ ಸಂದೇಶವನ್ನು ಪ್ರಕಟಿಸಿರುವುದು ವರದಿಯಿಂದ ತಿಳಿದುಬಂದಿದೆ. ಅಮೆರಿಕ ಮತ್ತು ಇಸ್ರೇಲ್ ಪ್ರಜೆಗಳನ್ನೇ ಗುರಿಯಾಗಿಸಿ ದಾಳಿ ನಡೆಸಲು ಸೂಚನೆ ನೀಡಲಾಗಿದೆ. ಟೆಲಿಗ್ರಾಂ ಚಾನೆಲ್ ಮೂಲಕವೂ ಈ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಫ್ಲೈದುಬೈ ಘಟನೆ: ಏನಾಗಿತ್ತು?
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಹೈಜಾಕ್ ಮಾಡಿ ಪತನಗೊಳಿಸಲು ಒಮಾನ್ ಸಹ-ಪೈಲಟ್ ಯತ್ನಿಸಿದ್ದ. ವಿಮಾನ ಹಾರಾಟ ನಡೆಸುತ್ತಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಹರಿತವಾದ ವಸ್ತುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿ ವಿಮಾನ ಪತನಕ್ಕೆ ಯತ್ನಿಸಿದ್ದ. ಪ್ರಾಣದ ಹಂಗು ತೊರೆದು ಭಾರತೀಯ ಪೈಲಟ್ ಆರೋಪಿ ಜೊತೆ ಹೋರಾಡಿ ಕಾಕ್‌ಪಿಟ್ ಓಪನ್ ಮಾಡಿದರು.
ಈ ವೇಳೆ ಪ್ರಯಾಣಿಕರು, ಇತರೆ ಸಿಬ್ಬಂದಿ ಒಳಬಂದು ಪೈಲಟ್ ಸ್ಮಿತ್‌ಗೆ ನೆರವಾದರು. ಆರೋಪಿಯನ್ನು ಹಿಡಿದರು. ಅಂತಿಮವಾಗಿ 180 ಪ್ರಯಾಣಿಕರಿದ್ದ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಲ್ಯಾಂಡ್ ಮಾಡಲಾಯಿತು. ಈ ಘಟನೆಯನ್ನು ಅಲ್ ಖೈದಾ ಶ್ಲಾಘಿಸಿದ್ದು, ಇದೇ ಮಾದರಿಯಲ್ಲಿ ವಿಮಾನಗಳನ್ನು ದಾಳಿಗೆ ಬಳಸುವಂತೆ ಸೂಚನೆ ನೀಡಿದೆ.
ಈ ಬೆಳವಣಿಗೆಯು ಜಾಗತಿಕ ವಾಯುಯಾನ ಭದ್ರತೆಗೆ ಮತ್ತೊಂದು ದೊಡ್ಡ ಸವಾಲನ್ನು ಸೃಷ್ಟಿಸಿದೆ. ಅಲ್ ಖೈದಾದಂತಹ ಉಗ್ರ ಸಂಘಟನೆಗಳು ವಿಮಾನಗಳನ್ನು ಬಳಸಿ ದಾಳಿ ನಡೆಸಲು ಪ್ರೇರೇಪಿಸುತ್ತಿರುವುದು ಆತಂಕಕಾರಿ. ಈ ಹಿನ್ನೆಲೆ ವಿಮಾನಯಾನ ಸಂಸ್ಥೆಗಳು ಮತ್ತು ಭದ್ರತಾ ಸಂಸ್ಥೆಗಳು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಶೌರ್ಯವನ್ನು ಜಾಗತಿಕ ಮಟ್ಟದಲ್ಲಿ ಶ್ಲಾಘಿಸಲಾಗಿದ್ದು, ಅವರ ಧೈರ್ಯದಿಂದ 180 ಪ್ರಯಾಣಿಕರ ಪ್ರಾಣ ಉಳಿದಿದೆ.
]
