ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೆ ಸಮರ ಸಾರಲು ಸಜ್ಜಾಗಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆರಿಕವು ಇಚ್ಛಿಸಿದರೆ ಒಂದೇ ರಾತ್ರಿಯಲ್ಲಿ ಇಡೀ ಇರಾನ್ ದೇಶವನ್ನು ನಕ್ಷೆಯಿಂದ ಅಳಿಸಿಹಾಕಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ 8:00 ಗಂಟೆಯೊಳಗೆ (ಪೂರ್ವ ಸಮಯ) ಇರಾನ್ ತನ್ನ ನಿಲುವನ್ನು ಬದಲಿಸದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗಡುವು ನೀಡಿದ್ದಾರೆ.
ಮೂಲಸೌಕರ್ಯಗಳ ಮೇಲೆ ದಾಳಿಯ ಬೆದರಿಕೆ
ಇರಾನ್‌ನ ಪ್ರಮುಖ ತೈಲ ಸಾಗಣೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಕೂಡಲೇ ಮುಕ್ತಗೊಳಿಸುವಂತೆ ಟ್ರಂಪ್ ಆಗ್ರಹಿಸಿದ್ದಾರೆ. ಒಂದು ವೇಳೆ ಟೆಹ್ರಾನ್ ಒಪ್ಪಂದಕ್ಕೆ ಬರಲು ವಿಫಲವಾದರೆ, ಇರಾನ್‌ನ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ದೇಶದ ಇತರ ನಿರ್ಣಾಯಕ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮಂಗಳವಾರ ಇರಾನ್‌ನಲ್ಲಿ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ದಿನವಾಗಲಿದೆ ಎಂದು ಹೇಳುವ ಮೂಲಕ ಟ್ರಂಪ್ ಸರಣಿ ವೈಮಾನಿಕ ದಾಳಿಯ ಮುನ್ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸೇತುವೆ ಮತ್ತು ವಿದ್ಯುತ್ ಸ್ಥಾವರಗಳಿಗಿಂತಲೂ ಭೀಕರವಾದ ಅಸ್ತ್ರಗಳು ಅಮೆರಿಕದ ಬಳಿ ಇವೆ ಎಂದು ಅವರು ಹೇಳಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.
ಈ ಯುದ್ದವನ್ನ ಅಂತ್ಯಗೊಳಿಸಲು ಮಧ್ಯಸ್ಥಿಕೆ ವಹಿಸುತ್ತಿರುವ ದೇಶಗಳು 45 ದಿನಗಳ ತಾತ್ಕಾಲಿಕ ಕದನ ವಿರಾಮದ ಪ್ರಸ್ತಾವನೆಯನ್ನು ಮುಂದಿಟ್ಟಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ಇದೊಂದು ಮಹತ್ವದ ಹೆಜ್ಜೆ ನಿಜ, ಆದರೆ ಇದು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. ಅತ್ತ ಇರಾನ್ ಕೂಡ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಯುದ್ಧವು ಶಾಶ್ವತವಾಗಿ ನಿಲ್ಲಬೇಕೆಂದು ಹತ್ತು ಷರತ್ತುಗಳನ್ನು ವಿಧಿಸಿದೆ.
ತೈಲ ವಶಪಡಿಸಿಕೊಳ್ಳುವ ಬಯಕೆ
ಟ್ರಂಪ್ ಅವರು ಈ ಹಿಂದಿನಂತೆಯೇ ಇರಾನ್‌ನ ತೈಲ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ತಮ್ಮ ಆಸೆಯನ್ನು ಮತ್ತೆ ಮುಂದಾಳತ್ವಕ್ಕೆ ತಂದಿದ್ದಾರೆ. ನನಗೆ ವೈಯಕ್ತಿಕವಾಗಿ ಆಸೆ ಇದ್ದರೆ ನಾನು ತೈಲವನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಆದರೆ ಅಮೆರಿಕದ ನಾಗರಿಕರು ಅದನ್ನು ಇಷ್ಟಪಡುತ್ತಾರೆಯೇ ಎಂದು ನನಗೆ ತಿಳಿದಿಲ್ಲ.
ಇರಾನ್ ಜನರು ಪ್ರಸ್ತುತ ಆಡಳಿತದಿಂದ ಬೇಸತ್ತಿದ್ದಾರೆ ಮತ್ತು ಅವರಿಗೆ ಶಸ್ತ್ರಾಸ್ತ್ರಗಳು ಸಿಕ್ಕರೆ ಎರಡು ಸೆಕೆಂಡುಗಳಲ್ಲಿ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಅವರು ಹೇಳಿದ್ದಾರೆ. ಇರಾನ್ ಜನರು ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ, ಹಾಗಾಗಿ ಅವರು ಬಾಂಬ್‌ಗಳ ಸದ್ದನ್ನು ಕೇಳಲು ಬಯಸುತ್ತಿದ್ದಾರೆ. ನಾವು ಅವರಿಗಾಗಿ, ಅವರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
