ವಾಷಿಂಗ್ಟನ್ ಡಿಸಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಈಗ ಏಷ್ಯಾದತ್ತ ತಿರುಗಿದೆ. ಇರಾನ್ ಜೊತೆಗಿನ ಯುದ್ಧದ ಅಂತ್ಯದ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದೇ ವೇಳೆ ಅತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧವೂ ಅಮೆರಿಕ ಪರೋಕ್ಷವಾಗಿ ಸಮರ ಸಾರಿದಂತೆ ಕಾಣುತ್ತಿದೆ.
ಮಧ್ಯಪ್ರಾಚ್ಯದ ಜಗಳದ ನಡುವೆಯೂ ಟ್ರಂಪ್ ತಮ್ಮ ಗಮನವನ್ನು ಏಷ್ಯಾದ ಮೇಲೆ ಕೇಂದ್ರೀಕರಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಅಮೆರಿಕವು ಹಠಾತ್ತನೆ ತನ್ನ ಸೈನ್ಯವನ್ನು ನಿಯೋಜಿಸಿರುವುದು ಜಾಗತಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದನ್ನು ಕಿಮ್ ಜಾಂಗ್ ಉನ್ ಮೇಲೆ ಒತ್ತಡ ಹೇರುವ ಕಾರ್ಯತಂತ್ರ ಎಂದು ಕೆಲವು ಕೆಲವು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ‘ಫ್ರೀಡಂ ಶೀಲ್ಡ್’ (Freedom Shield) ಹೆಸರಿನ ಬೃಹತ್ ಮಿಲಿಟರಿ ವ್ಯಾಯಾಮವನ್ನು ಆರಂಭಿಸಿವೆ. ಸಾವಿರಾರು ಸೈನಿಕರು ಇದರಲ್ಲಿ ಭಾಗಿಯಾಗಿದ್ದು, ಇದು ಕೇವಲ ತರಬೇತಿಯೋ ಅಥವಾ ಯುದ್ಧದ ಮುನ್ಸೂಚನೆಯೋ ಎಂಬ ಚರ್ಚೆ ಶುರುವಾಗಿದೆ. ಈ ಹಿಂದೆ ಇಂತಹ ವ್ಯಾಯಾಮಗಳನ್ನು ಕಿಮ್ ಯುದ್ಧದ ಸಿದ್ಧತೆ ಎಂದು ಕರೆದಿದ್ದರು, ಈಗ ಇದು ಅವರ ಆತಂಕವನ್ನು ಇಮ್ಮಡಿಗೊಳಿಸಿದೆ.
ಇತ್ತ ಇರಾನ್‌ನಲ್ಲೂ ದೊಡ್ಡ ಬದಲಾವಣೆಯಾಗಿದೆ. ಅಲಿ ಖಮೇನಿ ಅವರ ಮರಣದ ನಂತರ, ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಅಲಿ ಖಮೇನಿ ಅವರ ಎರಡನೇ ಪುತ್ರ ಮೊಜ್ತಬಾ ಖಮೇನಿ (Mojtaba Khamenei) ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಧಾರ್ಮಿಕ ಮತ್ತು ರಾಜಕೀಯ ವಲಯಗಳಲ್ಲಿ ಪ್ರಬಲ ಹಿಡಿತ ಹೊಂದಿರುವ ಮೊಜ್ತಬಾ ಅವರಿಗೆ ಇರಾನ್‌ನ ಪ್ರಬಲ ಸೈನ್ಯವಾದ IRGC (Islamic Revolutionary Guard Corps) ಸಂಪೂರ್ಣ ಬೆಂಬಲ ಘೋಷಿಸಿದೆ. ಹೊಸ ನಾಯಕನ ಆದೇಶದಂತೆ ಯಾವುದೇ ಕ್ಷಣದಲ್ಲೂ ಅಮೆರಿಕ ಅಥವಾ ಇಸ್ರೇಲ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧವಿರುವುದಾಗಿ IRGC ಗುಡುಗಿದೆ.
ಹೊಸ ನಾಯಕನ ಆಯ್ಕೆಯ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಮೊಜ್ತಬಾ ಖಮೇನಿ ಅವರು ಗಾಯಗೊಂಡಿದ್ದಾರೆ ಎಂದು ‘ಇರಾನ್ ಇಂಟರ್ನ್ಯಾಷನಲ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ಇರಾನ್ ಜನರಲ್ಲಿ ಆತಂಕ ಹೆಚ್ಚಿಸಿದೆ. ತನ್ನ ತಂದೆಯ ಹಾದಿಯನ್ನೇ ಅನುಸರಿಸಲಿರುವ ಮೊಜ್ತಬಾ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆಯುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
