ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ನೀಡಿದ ಸ್ಫೋಟಕ ಹೇಳಿಕೆಗಳು ಜಾಗತಿಕ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಸಿವೆ. ಕೇವಲ ನಾಲ್ಕೈದು ದಿನಗಳ ಹಿಂದಷ್ಟೇ 1992ರಲ್ಲಿ ಸ್ಥಗಿತಗೊಂಡಿದ್ದ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ ಬೆನ್ನಲ್ಲೇ, “ಇಡೀ ಜಗತ್ತನ್ನು 150 ಬಾರಿ ಸಂಪೂರ್ಣ ನಾಶಮಾಡುವಷ್ಟು ಪರಮಾಣು ಬಾಂಬ್‌ಗಳು ನಮ್ಮ ಬಳಿ ಇವೆ” ಎಂದು ಟ್ರಂಪ್ ಬಾಯ್ಬಿಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಚೀನಾವು ಅಮೆರಿಕಾವನ್ನು ನಿರಂತರವಾಗಿ ಗಮನಿಸುತ್ತಿದೆ ಎಂದು ಆರೋಪಿಸಿದರು. “ಅವರು ನಮ್ಮ ಕಾರ್ಯಗಳನ್ನು ನೋಡಿ ಭಯಭೀತರಾಗಿದ್ದಾರೆ. ನಮ್ಮ ಬಲದ ಆಳವನ್ನು ಅವರಿಗೆ ಅರ್ಥಮಾಡಿಸುತ್ತೇವೆ” ಎಂದು ಅವರು ದೃಢವಾಗಿ ಹೇಳಿದರು.. ಟ್ರಂಪ್ ಅವರ ಪ್ರಕಾರ, ಇದು ತುಂಬಾ ಸ್ಪರ್ಧಾತ್ಮಕ ಜಗತ್ತು, ವಿಶೇಷವಾಗಿ ಅಮೆರಿಕಾ-ಚೀನಾ ಸಂಬಂಧಗಳಲ್ಲಿ. “ನಾವು ಅವರನ್ನು ಗಮನಿಸುತ್ತಿದ್ದೇವೆ, ಅವರು ನಮ್ಮನ್ನು ಗಮನಿಸುತ್ತಾರೆ. ಆದರೂ ಪರಸ್ಪರ ಸಹಕಾರದ ಮೂಲಕ ನಾವು ಉತ್ತಮವಾಗಿ ಹೊಂದಿಕೊಂಡು, ದೊಡ್ಡದಾಗಿ ಮತ್ತು ಬಲಿಷ್ಠವಾಗಿ ಬೆಳೆಯಬಹುದು” ಎಂದು ಅವರು ಹೇಳಿದರು.
ಚೀನಾದ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತನಾಡಿದ ಟ್ರಂಪ್, ಅದು ವೇಗವಾಗಿ ವಿಸ್ತರಿಸುತ್ತಿದೆ ಎಂದು ಎಚ್ಚರಿಕೆ ನೀಡಿದರು. “ಪರಮಾಣು ನಿಶಸ್ತ್ರೀಕರಣ ತುಂಬಾ ಗಂಭೀರ ವಿಷಯ. ಆದರೆ ಈಗಲೂ ನಮ್ಮ ಬಳಿ ಜಗತ್ತನ್ನು 150 ಬಾರಿ ಸ್ಪೋಟಿಸುವಷ್ಟು ಶಸ್ತ್ರಾಸ್ತ್ರಗಳಿವೆ. ರಷ್ಯಾಕ್ಕೆ ಸಾಕಷ್ಟು ಅಣ್ವಸ್ತ್ರಗಳಿವೆ, ಚೀನಾ ಕೂಡ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುತ್ತಿದೆ. ಎಲ್ಲರ ಬಳಿಯೂ ಸಾಕಷ್ಟು ಇದೆ” ಎಂದು ಅವರು ವಿವರಿಸಿದರು. ಈ ಅಂಕಿಅಂಶಗಳು ಅಮೆರಿಕಾದ ಅಣ್ವಸ್ತ್ರ ಆರ್ಸೆನಲ್‌ನ ಭಯಾನಕ ಶಕ್ತಿಯನ್ನು ಬಿಚ್ಚಿಡುತ್ತವೆ. ಅಮೆರಿಕಾದಲ್ಲಿ ಸುಮಾರು 5,000ಕ್ಕೂ ಹೆಚ್ಚು ಅಣುಬಾಂಬ್‌ಗಳಿವೆ ಎಂದು ಅಂದಾಜಿಸಲಾಗಿದೆ.
ಟ್ರಂಪ್ ಅವರು ತಮ್ಮ ಇತ್ತೀಚಿನ ಆದೇಶವನ್ನು ಸಮರ್ಥಿಸಿಕೊಂಡರು. 1992ರಲ್ಲಿ ಸಹಿ ಹಾಕಲಾದ ಸಮಗ್ರ ಅಣುಪರೀಕ್ಷಾ ನಿಷೇಧ ಒಪ್ಪಂದ (CTBT) ಅಡಿ ಅಮೆರಿಕಾ ಪರೀಕ್ಷೆಗಳನ್ನು ನಿಲ್ಲಿಸಿತ್ತು. ಆದರೆ ಚೀನಾ ಮತ್ತು ರಷ್ಯಾ ತಮ್ಮ ಅಣ್ವಸ್ತ್ರಗಳನ್ನು ರಹಸ್ಯವಾಗಿ ಪರೀಕ್ಷಿಸುತ್ತಿವೆ ಎಂದು ಆರೋಪಿಸಿ, “ಅಮೆರಿಕಾ ತನ್ನ ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ” ಎಂದು ಟ್ರಂಪ್ ಹೇಳಿದರು.
ಈ ಹೇಳಿಕೆಗಳು ಚೀನಾ-ಅಮೆರಿಕಾ ವ್ಯಾಪಾರ ಯುದ್ಧದ ನಡುವೆ ಬಂದಿರುವುದು ಗಮನಾರ್ಹವಾಗಿದೆ. ಚೀನಾವು ತನ್ನ ಅಣುಭಂಡಾರವನ್ನು 2030ರ ವೇಳೆಗೆ 1,000ಕ್ಕೆ ಹೆಚ್ಚಿಸುವ ಯೋಜನೆ ಹೊಂದಿದೆ ಎಂದು ಪೆಂಟಗನ್ ವರದಿ ಹೇಳುತ್ತದೆ. ರಷ್ಯಾವೂ ಸಹ ಹೈಪರ್‌ಸಾನಿಕ್ ಮಿಸೈಲ್‌ಗಳೊಂದಿಗೆ ಮುಂದಿದೆ. ಟ್ರಂಪ್ ಅವರ ಈ ಘೋಷಣೆಯು ಅಮೆರಿಕಾದ ‘ಮ್ಯಾಕ್ಸಿಮಮ್ ಪ್ರೆಶರ್’ ನೀತಿಯ ಭಾಗವಾಗಿದೆ, ಆದರೆ ಇದು ಪರಮಾಣು ಯುದ್ಧದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಶ್ಲೇಷಕರು ಎಚ್ಚರಿಸುತ್ತಾರೆ.
