ವಿಶ್ವದ ದೊಡ್ಡಣ್ಣ ಡೊನಾಲ್ಡ್‌ ಟ್ರಂಪ್‌ಗೆ ಕಾಡ್ತಿದ್ಯಾ ಚರ್ಮರೋಗ ಸಮಸ್ಯೆ?

Untitled design 2026 03 03T203026.155

ವಾಷಿಂಗ್ಟನ್ ಡಿಸಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಹೊತ್ತಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಕೈಜೋಡಿಸಿರುವ ಹಿನ್ನೆಲೆ ಜಾಗತಿಕ ರಾಜಕೀಯ ತಾಪಮಾನ ಏರಿಕೆಯಾಗಿರುವಾಗಲೇ, ಟ್ರಂಪ್ ಅವರ ಕತ್ತಿನ ಬಲಭಾಗದಲ್ಲಿ ಕೆಂಪು ಬಣ್ಣದ ಚರ್ಮದ ದದ್ದುಗಳು ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಿಂದ ಅಧ್ಯಕ್ಷರಿಗೆ ಚರ್ಮರೋಗ ಕಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಕಳೆದ ಕೆಲವು ದಿನಗಳಿಂದ ಟ್ರಂಪ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬ ವದಂತಿಗಳು ಹರಡುತ್ತಿವೆ. ಆದರೆ ಈ ಕುರಿತಾಗಿ ವೈಟ್ ಹೌಸ್ ಅಥವಾ ಟ್ರಂಪ್ ಕುಟುಂಬದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹೆಚ್ಚುತ್ತಿವೆ.

ಫೋಟೋ ವೈರಲ್, ಸ್ಪಷ್ಟನೆ ಗೈರು

ವೈರಲ್ ಆಗಿರುವ ಫೋಟೋದಲ್ಲಿ ಟ್ರಂಪ್ ಅವರ ಕತ್ತಿನ ಬಲಭಾಗದಲ್ಲಿ ಕೆಂಪು ಚರ್ಮದ ಗುರುತುಗಳು ಕಾಣಿಸುತ್ತಿವೆ. ವರದಿಗಳ ಪ್ರಕಾರ, ಟ್ರಂಪ್ ಚರ್ಮದ ಸಮಸ್ಯೆಗೆ ‘ಮೊಮೆಟಾಸೋನ್’ ಕ್ರೀಮ್ ಬಳಸುತ್ತಿರುವುದಾಗಿ ಹೇಳಲಾಗುತ್ತಿದೆ. ಈ ಕ್ರೀಮ್‌ನ ಪರಿಣಾಮವಾಗಿ ತಾತ್ಕಾಲಿಕ ದದ್ದುಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಇದು ವೈದ್ಯರು ಸೂಚಿಸಿದ ಔಷಧ ಬಳಕೆಯಿಂದ ಉಂಟಾಗಿರುವ ಸಾಮಾನ್ಯ ಪರಿಣಾಮವಾಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಆದರೆ ಈ ಬಗ್ಗೆ ಅಧಿಕೃತ ವೈದ್ಯಕೀಯ ವರದಿ ಹೊರಬಂದಿಲ್ಲ. ಇದರಿಂದ “ಚರ್ಮದ ಅಲರ್ಜಿ ಮಾತ್ರವೇ? ಅಥವಾ ಇನ್ನಾವುದೇ ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆವೇ?” ಎಂಬ ಪ್ರಶ್ನೆಗಳು ಎದ್ದಿವೆ.

10 ಕೆಜಿ ತೂಕ ಇಳಿಕೆ

78 ವರ್ಷದ ಟ್ರಂಪ್ ಇತ್ತೀಚೆಗೆ ತಮ್ಮ ದೈಹಿಕ ತಪಾಸಣೆ ಮಾಡಿಸಿಕೊಂಡಿದ್ದರು. ಆ ತಪಾಸಣೆಯ ನಂತರ ಅವರು ಸುಮಾರು 20 ಪೌಂಡ್‌ಗಳಷ್ಟು, ಅಂದರೆ ಸುಮಾರು 10 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ವೈದ್ಯರು ಇದನ್ನು ನಿಯಂತ್ರಿತ ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾವಣೆಯ ಫಲವೆಂದು ಹೇಳಿದ್ದಾರೆಯೇ ಹೊರತು, ಗಂಭೀರ ಅನಾರೋಗ್ಯದ ಸೂಚನೆ ಎಂದು ಸ್ಪಷ್ಟಪಡಿಸಿಲ್ಲ.

ಆದರೂ ವಯಸ್ಸು, ತೂಕ ಇಳಿಕೆ ಮತ್ತು ಈಗ ವೈರಲ್ ಆಗಿರುವ ಚರ್ಮದ ದದ್ದುಗಳ ಫೋಟೋ ಈ ಮೂರೂ ಸಂಗತಿಗಳು ಸೇರಿ ಟ್ರಂಪ್ ಆರೋಗ್ಯದ ಬಗ್ಗೆ ಕುತೂಹಲ ಮತ್ತು ಅನುಮಾನ ಹೆಚ್ಚಿಸಿವೆ.

ಅಧಿಕೃತ ಸ್ಪಷ್ಟನೆಗೆ ನಿರೀಕ್ಷೆ

ಇಲ್ಲಿಯವರೆಗೆ ಟ್ರಂಪ್ ಅವರ ಆರೋಗ್ಯದ ಬಗ್ಗೆ ಯಾವುದೇ ಗಂಭೀರ ವೈದ್ಯಕೀಯ ಘೋಷಣೆ ಹೊರಬಂದಿಲ್ಲ. ವೈರಲ್ ಫೋಟೋ ಆಧಾರವಾಗಿ ಮಾತ್ರ ಅನಾರೋಗ್ಯದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

Exit mobile version