ಅಮೆರಿಕ ಅಧ್ಯಕ್ಷ ಟ್ರಂಪ್‌ ಹ*ತ್ಯೆಗೆ ಸ್ಕೆಚ್: ‘ಪ್ರಣಾಳಿಕೆ’ ಮೂಲಕ ಬಯಲಾಯ್ತು ಭಯಾನಕ ಸಂಚು

Untitled design 2026 04 27T085230.281

ವಾಷಿಂಗ್ಟನ್, ಏಪ್ರಿಲ್ 27: ಅಮೆರಿಕದ ಇತಿಹಾಸದಲ್ಲೇ ದೊಡ್ಡ ದುರಂತವನ್ನು ಸಮಯಕ್ಕೆ ಸರಿಯಾದ ಮಾಹಿತಿ ತಪ್ಪಿಸಿದೆ. ಶ್ವೇತಭವನದ ವರದಿಗಾರರ ಭೋಜನಕೂಟ ನಡೆಯುತ್ತಿದ್ದ ವಾಷಿಂಗ್ಟನ್ ಹಿಲ್ಟನ್ ಹೋಟೆಲ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ 2,500 ಕ್ಕೂ ಹೆಚ್ಚು ಗಣ್ಯರನ್ನು ಹತ್ಯೆಗೈಯ್ಯಲು ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂಬಾತ ಸಂಚು ರೂಪಿಸಿದ್ದ. ಆದರೆ, ಆತನ ಸಹೋದರ ನೀಡಿದ ಮಾಹಿತಿಯಿಂದಾಗಿ ಸೀಕ್ರೆಟ್ ಸರ್ವಿಸ್ ದಾಳಿಕೋರನನ್ನು ದಾಳಿಗೆ ಕೇವಲ 10 ನಿಮಿಷ ಮೊದಲು ಬಂಧಿಸುವಲ್ಲಿ ಯಶಸ್ವಿಯಾಯಿತು.

‘ಪ್ರಣಾಳಿಕೆ’ಯೇ ಆಧಾರ
ಅಲೆನ್ ತನ್ನ ಕುಟುಂಬದ ಸದಸ್ಯರಿಗೆ “ಪ್ರಣಾಳಿಕೆ” ಎಂಬ ದಾಖಲೆಯನ್ನು ಕಳುಹಿಸಿದ್ದ. ಇದರಲ್ಲಿ ಅಧ್ಯಕ್ಷ ಟ್ರಂಪ್, ಅವರ ಆಡಳಿತದ ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡುವ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. “ನಾನು ಹೋಟೆಲ್‌ಗೆ ಹಲವಾರು ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದ್ದೇನೆ. ನನ್ನ ಗುರಿ ತಲುಪಲು ಯಾರನ್ನು ಬೇಕಾದರೂ ಕೊಲ್ಲಲು ಸಿದ್ಧ” ಎಂದು ಆತ ಬರೆದಿದ್ದ. ಇಷ್ಟೊಂದು ಗಂಭೀರ ದಾಖಲೆಯನ್ನು ಕಂಡ ತಕ್ಷಣವೇ ಆತನ ಸಹೋದರ ಕನೆಕ್ಟಿಕಟ್ ಪೊಲೀಸರಿಗೆ ಮಾಹಿತಿ ನೀಡಿದರು. ಇದರಿಂದ ದೊಡ್ಡ ಅನಾಹುತ ತಪ್ಪಿತು.

ಭದ್ರತಾ ಲೋಪಗಳ ಲೇವಡಿ
ತನ್ನ ಪ್ರಣಾಳಿಕೆಯಲ್ಲಿ ಅಲೆನ್ ಹೋಟೆಲ್‌ನ ಭದ್ರತಾ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾನೆ. “ನಾನು ಶಸ್ತ್ರಾಸ್ತ್ರಗಳೊಂದಿಗೆ ಒಳಗೆ ಬಂದಾಗ ಯಾರೂ ಪ್ರಶ್ನಿಸಲಿಲ್ಲ. ಭದ್ರತಾ ಸಿಬ್ಬಂದಿಯ ಗಮನವೆಲ್ಲ ಹೊರಗಿನ ಪ್ರತಿಭಟನಾಕಾರರ ಮೇಲಿತ್ತು, ಒಳಗಿರುವವರ ಮೇಲೆ ಅಲ್ಲ” ಎಂದು ಆತ ಬರೆದಿದ್ದಾನೆ. ಒಂದು ದಿನ ಮುಂಚಿತವಾಗಿ ಹೋಟೆಲ್‌ಗೆ ಪ್ರವೇಶಿಸಿ ಸಂಚು ರೂಪಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಕುತೂಹಲಕರ ವಿಷಯವೆಂದರೆ, ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಅವರನ್ನು ಮಾತ್ರ ಆತ ತನ್ನ ಗುರಿಯ ಪಟ್ಟಿಯಿಂದ ಹೊರಗಿಟ್ಟಿದ್ದನು.

ಸಮಯಕ್ಕೆ ಸರಿಯಾದ ಕಾರ್ಯಾಚರಣೆ
ಆರೋಪಿಯ ಸಹೋದರನ ಎಚ್ಚರಿಕೆಯ ಮಾಹಿತಿ ಸೀಕ್ರೆಟ್ ಸರ್ವಿಸ್‌ಗೆ ತಲುಪಿದ ತಕ್ಷಣ, ಅವರು ಕಾರ್ಯಾಚರಣೆ ನಡೆಸಿದರು. ಅಧ್ಯಕ್ಷರು ಕುಳಿತಿದ್ದ ಬಾಲ್ ರೂಂ ತಲುಪುವ ಮೊದಲೇ ಭದ್ರತಾ ತಪಾಸಣಾ ಕೇಂದ್ರದಲ್ಲೇ ಅಲೆನ್ ಬಂಧನಕ್ಕೊಳಗಾದ. ಅವನ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಒಂದು ವೇಳೆ ಈ ಮಾಹಿತಿ ಸ್ವಲ್ಪ ವಿಳಂಬವಾಗಿದ್ದರೆ, ಅಮೆರಿಕದ ಇತಿಹಾಸದಲ್ಲೇ ದೊಡ್ಡ ರಕ್ತಪಾತ ಸಂಭವಿಸಬಹುದಿತ್ತು.

Exit mobile version