ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25ರಷ್ಟು ಸುಂಕ: ಟ್ರಂಪ್ ಹೊಸ ಬಾಂಬ್

Untitled design 2026 01 13T110429.085

ವಾಷಿಂಗ್ಟನ್, ಜನವರಿ 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಜಾಗತಿಕ ವ್ಯಾಪಾರ ವಲಯದಲ್ಲಿ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಇರಾನ್‌ನೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ (Tariff) ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಯಾವುದೇ ತಿದ್ದುಪಡಿ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದು, ಇರಾನ್ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇರಾನ್ ಸರ್ಕಾರವನ್ನು ಜಾಗತಿಕವಾಗಿ ಆರ್ಥಿಕವಾಗಿ ಪ್ರತ್ಯೇಕಿಸುವುದು ಅಮೆರಿಕದ ಪ್ರಮುಖ ತಂತ್ರವಾಗಿದೆ.

ಈ ನಿರ್ಧಾರವು ಭಾರತ ಸೇರಿದಂತೆ ಹಲವು ದೇಶಗಳಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತ ಮತ್ತು ಇರಾನ್ ನಡುವಿನ ವ್ಯಾಪಾರ ಸಂಬಂಧಗಳು ದೀರ್ಘಕಾಲದಿಂದಲೂ ಬಲವಾಗಿವೆ. ಭಾರತವು ಇರಾನ್‌ನಿಂದ ಡ್ರೈಫ್ರೂಟ್ಸ್, ರಾಸಾಯನಿಕಗಳು, ಗಾಜಿನ ಉತ್ಪನ್ನಗಳು ಸೇರಿದಂತೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇನ್ನು ಭಾರತದಿಂದ ಇರಾನ್‌ಗೆ ಅಕ್ಕಿ, ಚಹಾ, ಸಕ್ಕರೆ, ಔಷಧಗಳು, ಯಂತ್ರೋಪಕರಣಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ರಫ್ತು ಮಾಡಲಾಗುತ್ತದೆ.

ವಿದೇಶಾಂಗ ಸಚಿವಾಲಯದ ಮಾಹಿತಿಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಇರಾನ್ ಭಾರತಕ್ಕೆ ಪ್ರಮುಖ ವ್ಯಾಪಾರ ಪಾಲುದಾರರಲ್ಲೊಂದಾಗಿದೆ. ಇಂತಹ ಸಂದರ್ಭದಲ್ಲಿ ಟ್ರಂಪ್‌ ಅವರ 25% ಸುಂಕ ನಿರ್ಧಾರವು ಭಾರತ–ಇರಾನ್ ವ್ಯಾಪಾರ ಸಂಬಂಧಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಭಾರತ ಅಮೆರಿಕದ ಸುಂಕ ಒತ್ತಡವನ್ನು ಎದುರಿಸುತ್ತಿದ್ದು, ರಷ್ಯಾದಿಂದ ತೈಲ ಖರೀದಿಸುತ್ತಿರುವ ಕಾರಣಕ್ಕೆ ಭಾರತಕ್ಕೆ ಶೇ.50ರಷ್ಟು ಸುಂಕ ವಿಧಿಸಲಾಗುತ್ತಿದೆ. ಇದರಲ್ಲಿ ಶೇ.25ರಷ್ಟು ಸುಂಕವು ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂಬ ಅಮೆರಿಕದ ವಾದದಿಂದ ಉಂಟಾಗಿದೆ. ಈಗ ಇರಾನ್ ಸಂಬಂಧಿತ ಹೊಸ ಸುಂಕ ನಿರ್ಧಾರವು ಭಾರತದ ಮೇಲೆ ಮತ್ತೊಂದು ಆರ್ಥಿಕ ಹೊರೆ ಆಗುವ ಸಾಧ್ಯತೆ ಇದೆ.

ಟ್ರಂಪ್ ನಿರ್ಧಾರವನ್ನು ಕೆಲವು ಅಮೆರಿಕದ ನಾಯಕರು ಸ್ವಾಗತಿಸಿದ್ದಾರೆ. ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ, “ಇರಾನ್ ಸರ್ಕಾರವನ್ನು ಆರ್ಥಿಕವಾಗಿ ಪ್ರತ್ಯೇಕಿಸುವ ಈ ಕ್ರಮವು ಬಲವಾದ ನಾಯಕತ್ವವನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ. ಇರಾನ್‌ನೊಳಗಿನ ಆರ್ಥಿಕ ಪರಿಸ್ಥಿತಿ ಈಗಾಗಲೇ ಗಂಭೀರವಾಗಿದ್ದು, ಹಣದುಬ್ಬರ, ನಿರುದ್ಯೋಗ ಮತ್ತು ಆಡಳಿತದ ವಿರುದ್ಧದ ಅಸಮಾಧಾನ ಹೆಚ್ಚುತ್ತಿದೆ.

ಇತ್ತೀಚಿನ ದಿನಗಳಲ್ಲಿ ಇರಾನ್‌ನ ಹಲವಾರು ನಗರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ಈ ಪ್ರತಿಭಟನೆಗಳಲ್ಲಿ ಇದುವರೆಗೆ 544ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 10 ಸಾವಿರಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ರಾಜಧಾನಿ ಟೆಹ್ರಾನ್ ಸೇರಿದಂತೆ ದೇಶಾದ್ಯಂತ ಸರ್ಕಾರದ ವಿರುದ್ಧ ಜನಸಾಗರವೇ ಬೀದಿಗಿಳಿದಿದೆ.

ಈ ನಡುವೆ, ಇರಾನ್ ಅಮೆರಿಕದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಇರಾನ್ ನಾಯಕರು ಸಂಭಾಷಣೆಗೆ ಆಸಕ್ತಿ ತೋರಿದ್ದಾರೆ ಎಂದು ಅವರು ಹೇಳಿದ್ದಾರೆ. ಸಭೆಗಾಗಿ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದ್ದು, ಆದರೆ ಇರಾನ್‌ನೊಳಗಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಮಾತುಕತೆಗೂ ಮುನ್ನವೇ ಅಮೆರಿಕ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

Exit mobile version