ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಭೀಕರ ಗುಂಡಿನ ದಾಳಿ ನಡೆದಿದ್ದು, ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ರೋಡ್ ಐಲ್ಯಾಂಡ್ ರಾಜ್ಯದ ಪ್ರಾವಿಡೆನ್ಸ್‌ನಲ್ಲಿರುವ ಈ ಕ್ಯಾಂಪಸ್‌ನ ಬರಸ್ ಅಂಡ್ ಹೋಲಿ ಎಂಜಿನಿಯರಿಂಗ್ ಕಟ್ಟಡದಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಘಟನೆ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ನಡೆದಿದ್ದು, ಫೈನಲ್ ಪರೀಕ್ಷೆಗಳು ನಡೆಯುತ್ತಿದ್ದ ಸಮಯದಲ್ಲಿ ಸಂಭವಿಸಿದೆ. ಏಳು ಮಹಡಿಗಳ ಈ ಕಟ್ಟಡದಲ್ಲಿ 100ಕ್ಕೂ ಹೆಚ್ಚು ಪ್ರಯೋಗಾಲಯಗಳು, ತರಗತಿ ಕೊಠಡಿಗಳು ಮತ್ತು ಕಚೇರಿಗಳಿವೆ. ದಾಳಿ ನಡೆದಾಗ ಎಂಜಿನಿಯರಿಂಗ್ ಮತ್ತು ಫಿಸಿಕ್ಸ್ ವಿಭಾಗದ ತರಗತಿಗಳು ನಡೆಯುತ್ತಿದ್ದವು. ಕಪ್ಪು ಬಟ್ಟೆ ಧರಿಸಿದ್ದ ಶಂಕಿತ ವ್ಯಕ್ತಿಯೊಬ್ಬ ಕಟ್ಟಡದ ಮೊದಲನೇ ಮಹಡಿಯ ತರಗತಿ ಕೊಠಡಿಯಲ್ಲಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ನಂತರ ಶಂಕಿತ ತಪ್ಪಿಸಿಕೊಂಡಿದ್ದಾನೆ.
ಘಟನೆಯ ತಕ್ಷಣ ವಿಶ್ವವಿದ್ಯಾನಿಲಯ ಆಡಳಿತವು ‘ಶೆಲ್ಟರ್ ಇನ್ ಪ್ಲೇಸ್’ ಎಚ್ಚರಿಕೆಯನ್ನು ಘೋಷಿಸಿತ್ತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಮತ್ತು ವಸತಿ ನಿಲಯಗಳಲ್ಲಿ ಅಡಗಿಕೊಂಡರು. ಕ್ಯಾಂಪಸ್‌ನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನೂರಾರು ಪೊಲೀಸರು ಮತ್ತು ಎಫ್‌ಬಿಐ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ.
ಆರಂಭದಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ವಿಶ್ವವಿದ್ಯಾನಿಲಯ ಮತ್ತು ಪೊಲೀಸರು ತಿಳಿಸಿದ್ದರು. ಆದರೆ ನಂತರ ಅದು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಲಾಯಿತು. ಶಂಕಿತ ಇನ್ನೂ ಬಂಧನದಲ್ಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪ್ರಾವಿಡೆನ್ಸ್ ಪೊಲೀಸರು ಶಂಕಿತನ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದು, ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯು ಕಟ್ಟಡದಿಂದ ಹೊರಬರುವುದು ಕಂಡಿದೆ.
ಈ ಘಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, “ನಾನು ಈ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಎಫ್‌ಬಿಐ ಸ್ಥಳದಲ್ಲಿದೆ. ಇದು ಭಯಾನಕ ಘಟನೆ, ಬಲಿಯಾದವರಿಗೆ ಪ್ರಾರ್ಥನೆ ಸಲ್ಲಿಸಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಆರಂಭದಲ್ಲಿ ಶಂಕಿತ ಬಂಧನದಲ್ಲಿದ್ದಾನೆ ಎಂದು ಹೇಳಿದ್ದ ಟ್ರಂಪ್, ನಂತರ ಶಂಕಿತ ಇನ್ನೂ ಸೆರೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಶ್ವವಿದ್ಯಾನಿಲಯ ಆಡಳಿತವು ತನ್ನ ಅಧಿಕೃತ ಖಾತೆಯಲ್ಲಿ, “ಈ ದುರಂತಕ್ಕೆ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಬಲಿಯಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ” ಎಂದು ಹೇಳಿದೆ. ಮುಂದಿನ ದಿನಗಳ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.
