ಮೃಗಾಲಯದ ಬೇಲಿ ದಾಟಿ, ಸಿಂಹದ ಬಾಯಿಗೆ ಆಹಾರವಾದ ಯುವಕ

Untitled design 2025 12 04T132026.492

ಬ್ರೆಜಿಲ್, ಡಿಸೆಂಬರ್ 04: ಸಿಂಹ ರಾಜನನ್ನು ಹತ್ತಿರದಿಂದ ನೋಡಬೇಕು! ಈ ಅವಿವೇಕದ ಆಸೆ ಒಬ್ಬ ಯುವಕನ ಜೀವಕ್ಕೇ ಕುತ್ತಾಗಿದೆ. ಕಾಡು ಪ್ರಾಣಿಗಳ ಸಾಮೀಪ್ಯವು ಎಷ್ಟು ಪ್ರಾಣಘಾತಕವಾಗಬಹುದು ಎಂಬುದರ ಭಯಾನಕ ನಿದರ್ಶನವಾಗಿ ಬ್ರೆಜಿಲ್‌ನಲ್ಲಿ ನಡೆದ ಒಂದು ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಿಂಹಗಳ ಬಳಿ ‘ಸೆಲ್ಫಿ’ ತೆಗೆದುಕೊಳ್ಳಲು ಪ್ರಯತ್ನಿಸಿ ಜನರು ಪ್ರಾಣ ಕಳೆದುಕೊಳ್ಳುವ ದುರಂತಗಳು ಹಿಂದೆ ಸಾಕಷ್ಟು ನಡೆದಿದ್ದರೂ, ಈ ಬಾರಿ ಮೃಗಾಲಯದೊಳಗೆ ಬೇಲಿ ದಾಟಿ ಸಿಂಹಕ್ಕೆ ಆಹಾರವಾದ ಭಾಯಾನಕ ಘಟನೆ ಎಲ್ಲರನ್ನು ಸ್ತಬ್ಧಗೊಳಿಸಿದೆ.

ಈ ಘಟನೆ ಬ್ರೆಜಿಲ್‌ನ ಅರುಡಾ ಕ್ಯಾಮರಾ ಮೃಗಾಲಯದಲ್ಲಿ (Aruda Camera Zoo) ನಡೆದಿರುವುದಾಗಿ ತಿಳಿದುಬಂದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಒಬ್ಬ ಯುವಕ ಸ್ಪಷ್ಟವಾಗಿ ಮೃಗಾಲಯದ ನಿಗದಿತ ಪಥ ಮತ್ತು ಸುರಕ್ಷತಾ ಬೇಲಿಗಳನ್ನು ಉಲ್ಲಂಘಿಸಿ, ಸಿಂಹವು ಇರುವ ಬಳಿ ನೇರವಾಗಿ ಹೋಗಲು ಪ್ರಯತ್ನಿಸುವುದನ್ನು ಕಾಣಬಹುದು. ಸುರಕ್ಷತಾ ಗೋಡೆಯ ಮೇಲೆ ಏರಿ ಮರದ ಮೂಲಕ ಸಿಂಹದ ಬಳಿ ಇರುವ ಜಾಗಕ್ಕೆ ಇಳಿದಿದ್ದಾನೆ.

 

ವೀಡಿಯೊ ದೃಶ್ಯಗಳು ತೋರಿಸುವಂತೆ, ಯುವಕನನ್ನು ಕಂಡ ಸಿಂಹ ತಕ್ಷಣವೇ ಗರ್ಜಿಸಿ ದಾಳಿ ಮಾಡಿತು. ಯುವಕ ಯಾವುದೇ ಪ್ರತಿರೋಧ ಮಾಡಲು ಅಗದೇ ಅಸಹಾಯಕನಾಗಿದ್ದಾನೆ. ಸಿಂಹವು ಯುವಕನನ್ನು ಎಳೆದುಕೊಂಡು, ಪೊದೆಗಳ ಆಚೆಗೆ ಎಳೆದುಕೊಂಡು ಹೋಯಿತು. ಅಲ್ಲಿ ಯುವಕನ ಮೇಲೆ ಸಿಂಹವು ಹಲ್ಲೆ ಮಾಡಿದೆ ಎನ್ನುವುದು ದೃಶ್ಯಗಳಿಂದ ಅರ್ಥವಾಗುತ್ತದೆ. ಈ ಭೀಕರ ದೃಶ್ಯವನ್ನು ಸ್ಥಳದಲ್ಲಿದ್ದ ಇತರ ಪ್ರವಾಸಿಗರು ತಮ್ಮ ಮೊಬೈಲ್ ಫೋನ್ ಕ್ಯಾಮರಾಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಆ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ರಾಕೆಟ್ ವೇಗದಲ್ಲಿ ಹರಡಿವೆ.

ಈ ಘಟನೆಯ ನಂತರ ಮೃಗಾಲಯದ ಅಧಿಕಾರಿಗಳು ತುರ್ತು ಕಾರ್ಯಾಚರಣೆ ನಡೆಸಿದರೂ, ಯುವಕನನ್ನು ಉಳಿಸಲು ಸಾಧ್ಯವಾಗಲಿಲ್ಲ. ಮೃಗಾಲಯದ ಪ್ರತಿನಿಧಿಯೊಬ್ಬರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಈ ಘಟನೆ ತೀರಾ ಬೇಸರದ ಸಂಗತಿಯಾಗಿದೆ. ಸುರಕ್ಷತಾ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿದ್ದು ಈ ದುರಂತಕ್ಕೆ ಕಾರಣವಾಗಿದೆ. ನಾವು ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ, ಆದರೆ ಆ ವ್ಯಕ್ತಿ ತಾನಾಗಿಯೇ ಈ ಸ್ಥತಿ ತಂದುಕೊಂಡಿದ್ದಾನೆ ಎಂದು ಹೇಳಿದ್ದಾರೆ. ಕಾಡು ಪ್ರಾಣಿಗಳು ಎಂದಿಗೂ ಸಾಕುಪ್ರಾಣಿಗಳಲ್ಲ, ಅವು ಶಕ್ತಿಯುತವಾಗಿವೆ ಹೆಚ್ಚು ದಾಳಿ ಮಾಡಬಹುದು. ಎಲ್ಲಾ ಪ್ರವಾಸಿಗರೂ ನಿಗದಿತ ಮಾರ್ಗದಲ್ಲಿ ಮಾತ್ರ ಚಲಿಸಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಬೇಲಿ ದಾಟಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ವೀಡಿಯೊವನ್ನು ಕಂಡ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬಹುತೇಕ ಬಳಕೆದಾರರು ಯುವಕನ ಅವಿವೇಕಿ ನಡವಳಿಕೆಗೆ ಆಶ್ಚರ್ಯ ವ್ಯಕ್ತಪಡಿಸಿದರೆ, ಅಂತಹ ಭೀಕರ ದೃಶ್ಯಗಳನ್ನು ಶೇರ್ ಮಾಡುವುದು ನೈತಿಕವಾಗಿ ಸರಿಯೇ ಎಂಬ ಬಗ್ಗೆ ಚರ್ಚೆಯೂ ನಡೆದಿದೆ. 

Exit mobile version