BREAKING: ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹ*ತ್ಯೆ: ಮತ್ತೊಬ್ಬ ವ್ಯಕ್ತಿ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ ಪುಂಡರು

Untitled design 2026 01 01T170837.496

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ. ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಲೇ ಬಂದಿದೆ. ಇತ್ತೀಚಿಗೆ 50 ವರ್ಷದ ಹಿಂದೂ ವ್ಯಕ್ತಿಯೊಬ್ಬನನ್ನು ಗುಂಪೊಂದು ಕ್ರೂರವಾಗಿ ಥಳಿಸಿ, ಹರಿತವಾದ ಆಯುಧಗಳಿಂದ ಇರಿದು, ಬಳಿಕ ಜೀವಂತವಾಗಿದ್ದಾಗಲೇ ಆತನಿಗೆ ಬೆಂಕಿ ಹಚ್ಚಿದೆ.

ಶರಿಯತ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಕೃತ್ಯ

ಡಿಸೆಂಬರ್ 31ರಂದು ಶರಿಯತ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತನನ್ನು ಖೋಕೋನ್ ದಾಸ್ (50) ಎಂದು ಗುರುತಿಸಲಾಗಿದೆ. ಖೋಕೋನ್ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ, ದಾರಿಯಲ್ಲಿ ಹೊಂಚು ಹಾಕಿದ್ದ ಮತಾಂಧರ ಗುಂಪೊಂದು ಅವರ ಮೇಲೆ ಏಕಾಏಕಿ ದಾಳಿ ಮಾಡಿದೆ. ಹರಿತವಾದ ಆಯುಧಗಳಿಂದ ಚುಚ್ಚಿ ಗಾಯಗೊಳಿಸಿದ ದುಷ್ಕರ್ಮಿಗಳು, ಬಳಿಕ ಅವರಿಗೆ ಬೆಂಕಿ ಹಚ್ಚಿದ್ದಾರೆ.ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಖೋಕೋನ್ ದಾಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಎರಡು ವಾರಗಳಲ್ಲಿ ನಾಲ್ಕನೇ ದಾಳಿ!

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳು ಆಕಸ್ಮಿಕವಲ್ಲ, ಬದಲಾಗಿ ವ್ಯವಸ್ಥಿತ ಸಂಚಾಗಿದೆ. ಕೇವಲ ಎರಡು ವಾರಗಳ ಅವಧಿಯಲ್ಲಿ ಹಿಂದೂಗಳ ಮೇಲೆ ನಡೆದ ನಾಲ್ಕನೇ ಪ್ರಮುಖ ದಾಳಿ ಇದಾಗಿದೆ:

ಡಿಸೆಂಬರ್ 24 ರಂದು ಹೊಸೈನ್‌ಡಂಗಾ ಪ್ರದೇಶದಲ್ಲಿ 29 ವರ್ಷದ ಅಮೃತ್ ಮಂಡಲ್ ಎಂಬ ಯುವಕನನ್ನು ಗುಂಪು ದಾಳಿ ನಡೆಸಿ ಹೊಡೆದು ಕೊಂದಿತ್ತು. ಡಿಸೆಂಬರ್ 18 ರಂದು ಮೈಮೆನ್ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ (25) ಎಂಬುವವರ ಮೇಲೆ ಸುಳ್ಳು ಧರ್ಮನಿಂದೆಯ ಆರೋಪ ಹೊರಿಸಿ, ಅವರನ್ನು ಸಹ ಕ್ರೂರವಾಗಿ ಕೊಂದು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಲಾಗಿತ್ತು.

ಅಂತರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ

ಬಾಂಗ್ಲಾದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರ ಮೇಲೆ ನಡೆಯುತ್ತಿರುವ ಈ ನಿರಂತರ ದ್ವೇಷದ ಬಗ್ಗೆ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಲ್ಲಿ ಯೂನಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಮುದಾಯವು ಈ ಕೂಡಲೇ ಹಸ್ತಕ್ಷೇಪ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಪ್ರತಿ ಬಾರಿ ಇಂತಹ ಘಟನೆಗಳು ನಡೆದಾಗಲೂ ಅಲ್ಲಿನ ಸರ್ಕಾರ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡುತ್ತಿದೆಯಾದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ವಾಸ್ತವದಲ್ಲಿ ಹಿಂದೂಗಳ ರಕ್ಷಣೆ ಮಾಡಲಾಗುತ್ತಿಲ್ಲ. ಈ ಸರಣಿ ಹತ್ಯೆಗಳು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ.

Exit mobile version