ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ: ಮತ್ತೊಬ್ಬ ಹಿಂದೂ ಯುವಕನ ಹತ್ಯೆ

Untitled design 2025 12 25T194755.856

ಢಾಕಾ, ಡಿಸೆಂಬರ್ 25: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ಹಿಂಸಾಚಾರದ ಘಟನೆಗಳು ಮುಂದುವರಿದಿದ್ದು, ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳು ದೇಶದೊಳಗೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಂಭೀರ ಚರ್ಚೆಗೆ ಕಾರಣವಾಗಿವೆ. ಈ ನಡುವೆ ಮತ್ತೊಬ್ಬ ಹಿಂದೂ ಯುವಕ ಗುಂಪು ಹಲ್ಲೆಗೆ ಬಲಿಯಾಗಿರುವ ಘಟನೆ ಬಾಂಗ್ಲಾದೇಶವನ್ನು ಮತ್ತೆ ಬೆಚ್ಚಿಬೀಳಿಸಿದೆ.

ರಾಜ್‌ಬಾರಿ ಜಿಲ್ಲೆಯ ಪಾಂಗ್ಶಾ ಉಪವಿಭಾಗದಲ್ಲಿ 29 ವರ್ಷದ ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ ಎಂಬ ಹಿಂದೂ ಯುವಕನನ್ನು ಸ್ಥಳೀಯ ಗುಂಪೊಂದು ಡಿಸೆಂಬರ್ 24ರ ರಾತ್ರಿ ಸುಮಾರು 11 ಗಂಟೆಗೆ ಹಲ್ಲೆ ಮಾಡಿ ಕೊಂದಿದೆ. ಪೊಲೀಸರು ಆತನನ್ನು ಗಂಭೀರ ಸ್ಥಿತಿಯಲ್ಲಿ ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಪಂಗಶಾ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಸಾಮ್ರಾಟ್ ಹೊಸಾಯಿದಂಗ ಗ್ರಾಮದ ನಿವಾಸಿಯಾಗಿದ್ದು, ಆತ ಸುಲಿಗೆಕೋರನಾಗಿದ್ದನೆಂಬ ಆರೋಪವನ್ನು ಕೆಲವು ಸ್ಥಳೀಯರು ಮಾಡಿದ್ದಾರೆ. ಆದರೆ ಈ ಆರೋಪಗಳ ಸತ್ಯಾಸತ್ಯತೆ ಇನ್ನೂ ದೃಢಪಡಿಸಿಲ್ಲ. ಹಲ್ಲೆ ನಡೆದ ಕೂಡಲೇ ಸಾಮ್ರಾಟ್‌ನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಕೆಲ ದಿನಗಳ ಹಿಂದೆ ನಡೆದ ಮತ್ತೊಂದು ಭೀಕರ ಹತ್ಯೆಯನ್ನು ನೆನಪಿಸುತ್ತದೆ. ದೀಪು ಚಂದ್ರದಾಸ್ ಎಂಬ ಹಿಂದೂ ವ್ಯಕ್ತಿಯನ್ನು ಗುಂಪು ಹಲ್ಲೆ ಮಾಡಿ ಕೊಂದ ಬಳಿಕ ಆತನ ಶವವನ್ನು ಸುಟ್ಟು ಹಾಕಲಾಗಿತ್ತು. ಆ ವೇಳೆ ದೀಪು ಇಸ್ಲಾಂ ಧರ್ಮ ನಿಂದನೆ ಮಾಡಿದ್ದಾನೆ ಎಂಬ ಆರೋಪವನ್ನು ಮುಂದಿಟ್ಟು ಹತ್ಯೆ ಮಾಡಿದ್ದಾಗಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಾಗಿತ್ತು. ಆದರೆ ನಂತರ ನಡೆದ ತನಿಖೆಯಲ್ಲಿ ಆ ಆರೋಪ ಸಂಪೂರ್ಣ ಸುಳ್ಳೆಂದು ಬಹಿರಂಗವಾಗಿತ್ತು.

ಇದೀಗ ಸಾಮ್ರಾಟ್ ಮೇಲೂ ಸುಲಿಗೆ ಆರೋಪ ಹೊರಿಸಿ, ಕೊಲೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಲಾಗುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಸುಳ್ಳು ಆರೋಪಗಳ ನೆಪದಲ್ಲಿ ಹಲ್ಲೆ ನಡೆಸಲಾಗುತ್ತಿದೆ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲೂ ವ್ಯಕ್ತವಾಗುತ್ತಿದೆ.

Exit mobile version