ಬಾಂಗ್ಲಾದ ಚುನಾವಣಾ ಕಣದಲ್ಲೂ ಜೋರಾಗಿದೆ ಕರ್ನಾಟಕದ ‘ಗ್ಯಾರಂಟಿ’ ಸ್ಕೀಂ

Untitled design 2026 02 11T081848.812

ಢಾಕಾ: ಚುನಾವಣೆಯ ಹಿನ್ನಲೆಯಲ್ಲಿ ಮತದಾರರ ಮನ ಸೆಳೆಯಲು ರಾಜಕೀಯ ಪಕ್ಷಗಳು ವಿವಿಧ ಕಲ್ಯಾಣ ಯೋಜನೆಗಳನ್ನು ಘೋಷಿಸುವುದು ಸಾಮಾನ್ಯ. ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ‘ಗ್ಯಾರಂಟಿ’ ಮಾದರಿಯ ಯೋಜನೆಗಳು ಯಶಸ್ಸು ಕಂಡಿರುವುದು ಈಗ ಬಾಂಗ್ಲಾದೇಶದ ರಾಜಕೀಯದಲ್ಲೂ ಪ್ರಭಾವ ಬೀರಿದಂತೆ ಕಾಣುತ್ತಿದೆ. ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ದಿನ ಮಾತ್ರ ಬಾಕಿ ಇರುವಾಗ, ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು ಜನಪರ ಯೋಜನೆಗಳ ಘೋಷಣೆ ಮೂಲಕ ಮತದಾರರನ್ನು ಆಕರ್ಷಿಸಲು ಮುಂದಾಗಿವೆ.

ಶೇಖ್ ಹಸೀನಾ ಪದಚ್ಯುತಿಯಾದ ಬಳಿಕ ಬಾಂಗ್ಲಾದಲ್ಲಿ ನಡೆಯುತ್ತಿರುವ ಈ ಚುನಾವಣೆಯು ರಾಜಕೀಯವಾಗಿ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಮತ್ತು ಜಮಾತ್-ಎ-ಇಸ್ಲಾಮಿ ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ವಿಶೇಷವಾಗಿ, ಮಹಿಳೆ, ರೈತ ಮತ್ತು ಬಡ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಕಲ್ಯಾಣ ಯೋಜನೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಗೃಹಲಕ್ಷ್ಮಿ ಮಾದರಿಯ ‘ಕುಟುಂಬ ಕಾರ್ಡ್’ ಘೋಷಣೆ

ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ದೇಶಾದ್ಯಂತ ಗಮನ ಸೆಳೆದಿತ್ತು. ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೇರ ಹಣ ವರ್ಗಾವಣೆ ಮಾಡುವ ಈ ಯೋಜನೆ ಮಹಿಳೆಯರಲ್ಲಿ ವಿಶೇಷ ಬೆಂಬಲ ಪಡೆದಿತ್ತು. ಇದೀಗ ಬಿಎನ್‌ಪಿ ಪಕ್ಷವು ಇದೇ ಮಾದರಿಯ ‘ಕುಟುಂಬ ಕಾರ್ಡ್’ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೆರವು ನೀಡುವುದಾಗಿ ತಿಳಿಸಲಾಗಿದೆ.

ಇದೇ ಕಾರ್ಡ್ ಮೂಲಕ ಅಕ್ಕಿ, ಧಾನ್ಯ, ಅಡುಗೆ ಎಣ್ಣೆ ಮತ್ತು ಉಪ್ಪು ಸೇರಿದಂತೆ ಅವಶ್ಯಕ ವಸ್ತುಗಳನ್ನು ಪಡೆಯುವ ವ್ಯವಸ್ಥೆಯನ್ನೂ ರೂಪಿಸುವುದಾಗಿ ಭರವಸೆ ನೀಡಲಾಗಿದೆ. ಮಧ್ಯಪ್ರದೇಶದ ಲಾಡ್ಲಿ ಬಹ್ನಾ ಹಾಗೂ ಮಹಾರಾಷ್ಟ್ರದ ಲಡ್ಕಿ ಬಹಿನ್ ಯೋಜನೆಗಳ ಯಶಸ್ಸು ಬಾಂಗ್ಲಾ ರಾಜಕೀಯದ ಮೇಲೆ ಪ್ರಭಾವ ಬೀರಿದಂತಿದೆ.

ಆಯುಷ್ಮಾನ್ ಭಾರತ್ ಮಾದರಿಯ ಆರೋಗ್ಯ ಯೋಜನೆ

ಜಮಾತ್-ಎ-ಇಸ್ಲಾಮಿ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಭಾರತದ ಆಯುಷ್ಮಾನ್ ಭಾರತ್ ಯೋಜನೆ ಮಾದರಿಯಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದೆ. ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ಹಾಗೂ ವೈದ್ಯಕೀಯ ಭದ್ರತೆ ಒದಗಿಸುವುದಾಗಿ ತಿಳಿಸಲಾಗಿದೆ.

ಭಾರತದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತಿದೆ. ಇದೇ ಮಾದರಿಯನ್ನು ಅನುಸರಿಸುವ ಭರವಸೆ ಜಮಾತ್ ಪಕ್ಷ ನೀಡಿದೆ. ಜೊತೆಗೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಮಾದರಿಯಲ್ಲಿ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಕೈಗೆಟುಕುವ ವಸತಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದೆ.

ಮಹಿಳಾ ಸಮೃದ್ಧಿ ಮತ್ತು ರೈತ ಕಾರ್ಡ್ ಭರವಸೆ

ಭಾರತದ ಮಹಿಳಾ ಸಮೃದ್ಧಿ ಯೋಜನೆಯಂತೆಯೇ ಬಿಎನ್‌ಪಿ ಪಕ್ಷವು ಆರ್ಥಿಕವಾಗಿ ದುರ್ಬಲ ಮಹಿಳೆಯರಿಗೆ ಮೈಕ್ರೋ-ಫೈನಾನ್ಸ್ ಯೋಜನೆ ಘೋಷಿಸಿದೆ. ಕೌಶಲ್ಯ ತರಬೇತಿ, ಸ್ವಯಂ ಉದ್ಯೋಗ ಮತ್ತು ಆದಾಯ ವೃದ್ಧಿಗೆ ಉತ್ತೇಜನ ನೀಡುವ ಉದ್ದೇಶ ಇದಾಗಿದೆ.

ಇದೇ ರೀತಿ, ಭಾರತದ ಕಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿ ‘ರೈತ ಕಾರ್ಡ್’ ನೀಡುವುದಾಗಿ ಘೋಷಿಸಲಾಗಿದೆ. ಈ ಯೋಜನೆಯಡಿ ರೈತರಿಗೆ ಸುಲಭ ಸಾಲ, ಸಬ್ಸಿಡಿ ಹಾಗೂ ಕೃಷಿ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ

ಭಾರತದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯೂ ಬಾಂಗ್ಲಾ ರಾಜಕೀಯ ಪಕ್ಷಗಳ ಗಮನ ಸೆಳೆದಿದೆ. ಭಾರತದಲ್ಲಿ 11.2 ಲಕ್ಷಕ್ಕೂ ಹೆಚ್ಚು ಶಾಲೆಗಳ ಸುಮಾರು 11.8 ಕೋಟಿ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಯೋಜನೆ ಜಾರಿಗೊಳಿಸುವುದಾಗಿ ಬಿಎನ್‌ಪಿ ಭರವಸೆ ನೀಡಿದೆ.

Exit mobile version