ಢಾಕಾ: ಸರ್ಕಾರಿ ವಸತಿ ಯೋಜನೆಯಲ್ಲಿ ಭೂ ಹಂಚಿಕೆ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರಿಗೆ ನ್ಯಾಯಾಲಯವು ಒಟ್ಟು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈ ತೀರ್ಪು ಹಸೀನಾ ಕುಟುಂಬದ ಮೇಲೆ ದೊಡ್ಡ ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.
ಪ್ರಕರಣದ ಹಿನ್ನೆಲೆ
ಢಾಕಾದ ವಿಶೇಷ ನ್ಯಾಯಾಧೀಶ ನ್ಯಾಯಾಲಯ-4 ರ ನ್ಯಾಯಾಧೀಶರಾದ ರಬಿಯುಲ್ ಅಲಂ ಅವರು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದಾರೆ. ಪುರ್ಬಚಲ್‌ನ ರಾಜುಕ್ ನ್ಯೂ ಟೌನ್ (RAJUK New Town) ಯೋಜನೆಯಡಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಹಸೀನಾ ಅವರ ಮೇಲಿತ್ತು. ಈ ಪ್ರಕರಣಕ್ಕೆ ಸಂಬಧಿಸಿದಂತೆ ಶೇಖ್ ಹಸೀನಾಗೆ ಪ್ರತಿ ಪ್ರಕರಣದಲ್ಲಿ ತಲಾ 5 ವರ್ಷದಂತೆ ಒಟ್ಟು 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆಗೆ 1,00,000 ಟಾಕಾ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 6 ತಿಂಗಳ ಕಾಲ ಜೈಲಿನಲ್ಲಿ ಇರಬೇಕಾಗುತ್ತದೆ.
ಕುಟುಂಬ ಸದಸ್ಯರಿಗೂ ತಪ್ಪದ ಜೈಲು ಶಿಕ್ಷೆ
ಕೇವಲ ಹಸೀನಾ ಮಾತ್ರವಲ್ಲದೆ, ಅವರ ಕುಟುಂಬದ ಸದಸ್ಯರಿಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಹಸೂನಾ ಅವರ ಸೋದರಸಂಬಂಧಿಗಳಾದ ರದ್ವಾನ್ ಮುಜೀಬ್ ಸಿದ್ದಿಕ್ ಮತ್ತು ಅಜ್ಜಿನಾ ಸಿದ್ದಿಕ್ ಅವರಿಗೆ ಎರಡೂ ಪ್ರಕರಣಗಳಲ್ಲಿ ಒಟ್ಟು 7 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿದೆ. ಇನ್ನೂ ಹಸೀನಾ ಅವರ ಸೋದರ ಸೊಸೆಯಾದ ತುಲಿಪ್ ರಿಜ್ವಾನಾ ಸಿದ್ದಿಕ್ ಅವರಿಗೆ ಇವರಿಗೆ ತಲಾ 2 ವರ್ಷದಂತೆ ಒಟ್ಟು 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಇನ್ನೂ ಈ ಪ್ರಕರನಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಖುರ್ಷಿದ್ ಆಲಂ ನ್ಯಾಯಾಲಯಕ್ಕೆ ಶರಣಾದ ಆರೋಪಿಯಾಗಿದ್ದಾರೆ ಹೀಗಾಗಿ ಇವರಿಗೆ ಒಟ್ಟು 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ಆಯೋಗವು (ACC) 2025 ರ ಜನವರಿ 13 ರಂದು 16 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಮಾರ್ಚ್ ತಿಂಗಳಲ್ಲಿ 18 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಸುಮಾರು 31 ಸಾಕ್ಷಿಗಳು ಸಾಕ್ಷ್ಯ ನುಡಿದ್ದರು. ಎಸಿಸಿ ಸಹಾಯಕ ನಿರ್ದೇಶಕ ಅಫ್ಘಾನ್ ಜನ್ನತ್ ಕೀಯಾ ಅವರ ಸಾಕ್ಷ್ಯವು ತೀರ್ಪಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ.
78 ವರ್ಷದ ಶೇಖ್ ಹಸೀನಾ ಅವರು ಪ್ರಸ್ತುತ ದೇಶದಲ್ಲಿ ಇಲ್ಲದಿದ್ದರೂ, ನ್ಯಾಯಾಲಯವು ನೀಡಿರುವ ಈ ತೀರ್ಪು ಬಾಂಗ್ಲಾದೇಶದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸರ್ಕಾರಿ ಭೂಮಿಯನ್ನು ತಮ್ಮ ಕುಟುಂಬಸ್ಥರಿಗೆ ಅಕ್ರಮವಾಗಿ ಹಂಚಿಕೆ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂಬುದು ಪ್ರಮುಖ ಆರೋಪವಾಗಿತ್ತು.
