ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಿಎಲ್‌ಎ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಹೈಜಾಕ್ ಮಾಡಿದೆ. ರೈಲು ಹೈಜಾಕ್ ಮಾಡಿರುವ ಬಿಎಲ್‌ಎ ಉಗ್ರರು ಒಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಪಾಕಿಸ್ತಾನ ಮತ್ತು ಚೀನಾಗೆ ಎಚ್ಚರಿಕೆ ನೀಡಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಖಡಕ್ ಎಚ್ಚರಿಕೆ ನೀಡಿರುವ ಬಿಎಲ್‌ಎ ಉಗ್ರರು ನಮ್ಮ ನೆಲದಿಂದ ಜಾಗ ಖಾಲಿ ಮಾಡಿ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನಿಮ್ಮನ್ನು ಸುಮ್ಮನೇ ಬಿಡಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಿಂದಲೂ ಬಲೂಚಿಸ್ತಾನ ಸಂಘರ್ಷಕ್ಕೆ ತೆರೆ ಬಿದ್ದಿಲ್ಲ. ಇದಕ್ಕೆ ಮೂಲ ಕಾರಣ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ. ಸುಮಾರು 75 ವರ್ಷಗಳಿಂದ ಬಲೂಚಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಇದ್ದಾರೆ.
ಪಾಕಿಸ್ತಾನದ ಸೇನೆ, ಚೀನಾ ಇಂಜಿನಿಯರ್‌ಗಳು ಬಲೂಚಿಸ್ತಾನ ಬಿಟ್ಟು ಹೋಗದೇ ಇದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬಿಎಲ್‌ಎ ಉಗ್ರ ಎಚ್ಚರಿಕೆ ಕೊಟ್ಟಿದ್ದಾನೆ. ನಮ್ಮ ನಾಯಕ ಜನರಲ್ ಅಸ್ಲಾಂ ಬಲೂಚ್ ಕಟ್ಟಾಜ್ಞೆಯ ಮೇರೆಗೆ ನಾವು ಈ ಎಚ್ಚರಿಕೆ ಕೊಡುತ್ತಿದ್ದೇವೆ. ನಾವು ಹಿಂದೆ ಕೊಟ್ಟಿದ್ದ ಎಚ್ಚರಿಕೆಗೆ ಚೀನಾ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಗ್ವಾದರ್ ಮತ್ತು ಬಲೂಚಿಸ್ತಾನ ಬಲೂಚಿಗಳಿಗೆ ಸೇರಿದ್ದು. ನಮ್ಮ ನೆಲ ಮತ್ತು ಜಲದ ರಕ್ಷಣೆ ನಮ್ಮ ಕರ್ತವ್ಯ. ಇದೊಂದು ನಿರಂತರ ಕಾರ್ಯಾಚರಣೆಯಾಗಿದ್ದು, ಬಲೂಚಿಸ್ತಾನವನ್ನು ಅತಿಕ್ರಮಿಸಿರುವ ಪಾಕಿಸ್ತಾನ, ಚೀನಾ ಅಥವಾ ಬೇರಾವುದೇ ವಿದೇಶಿ ಶಕ್ತಿಗಳನ್ನ ಹೊಡೆದೋಡಿಸುವುದೇ ನಮ್ಮ ಗುರಿ. ನಮ್ಮ ಅನುಮತಿ ಇಲ್ಲದೇ ಚೀನಾ ನಮ್ಮ ನೆಲವನ್ನು ಪ್ರವೇಶಿಸಿದೆ. ಪಾಕಿಸ್ತಾನ ಸೇನೆ ನಮ್ಮ ನೆಲವನ್ನು ಅತಿಕ್ರಮಿಸಿದೆ. ಸಿಪೆಕ್ ಎಂದರೆ ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಘನಘೋರ ವೈಫಲ್ಯ ಅನುಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ.
ಮಾರ್ಚ್ 11, ಮಂಗಳವಾರ ಪಾಕಿಸ್ತಾನದ ಅತ್ಯಂತ ದೊಡ್ಡ ಪ್ರಾಂತ್ಯ ಬಲೂಚಿಸ್ತಾನದಲ್ಲಿ ಬಲೂಚಿಸ್ತಾನ ಲಿಬರೇಷನ್ ಆರ್ಮಿಯವರು ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಹೈಜಾಕ್ ಮಾಡಿದ್ದರು. ಸುಮಾರು 6 ಜನ ಪಾಕ್ ಸೈನಿಕರನ್ನು ಹತ್ಯೆ ಮಾಡಿದ್ದರು. 450ಕ್ಕೂ ಹೆಚ್ಚು ಜನರನ್ನ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಲು ಶುರುವಾಗಿತ್ತು. ಕಾರು.. ಬಸ್ಸು ಹೈಜಾಕ್ ಮಾಡುವುದು, ಫ್ಲೈಟ್ ಹೈಜಾಕ್ ಮಾಡುವ ಸುದ್ದಿಯನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ರೈಲು ಹೈಜಾಕ್ ಎಂಬುದು ಅಪರೂಪದಲ್ಲೇ ಅಪರೂಪದ ಘಟನೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಹೀಗೆ ರೈಲು ಹೈಜಾಕ್ ಮಾಡಿದ ಉಗ್ರರು, ಬಲೂಚಿಸ್ತಾನದ ಮೇಲೆ ಪಾಕಿಸ್ತಾನ ಸೇನೆ ನಡೆಸುತ್ತಿರುವ ವಾಯು ದಾಳಿಯನ್ನು ನಿಲ್ಲಿಸದೇ ಹೋದರೆ, ಒತ್ತೆಯಾಳುಗಳಾಗಿರುವ ಎಲ್ಲ ಪಾಕ್ ಸೈನಿಕರನ್ನು ಹತ್ಯೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಬಲೂಚಿಸ್ತಾನ ಲಿಬರೇಷನ್ ಆರ್ಮಿ ಇಷ್ಟು ದಿನ ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಶಾಂತಿಯುತ ಹೋರಾಟ ಮಾಡುತ್ತಿತ್ತು. ಈಗ ಏಕಾಏಕಿ ಬಿಎಲ್‌ಎ ಸಶಸ್ತ್ರ ಹೋರಾಟವನ್ನು ಆರಂಭಿಸಿದೆ. ಬಿಎಲ್‌ಎ ಸಶಸ್ತ್ರ ಹೋರಾಟ ಆರಂಭಿಸಲು ಕಾರಣವೇನು..? ಇಷ್ಟಕ್ಕೂ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಉಗ್ರರ ಬೇಡಿಕೆಗಳೇನು..? ಏನಿದು ಬಲೂಚಿಸ್ತಾನ ಪ್ರತ್ಯೇಕತೆಯ ಹೋರಾಟ ಎಂಬುದನ್ನು ಕೆಣಕುತ್ತಾ ಹೋದರೆ ಪಾಕಿಸ್ತಾನದ ನರಿ ಬುದ್ಧಿ ತೆರೆದುಕೊಳ್ಳುತ್ತಾ ಹೋಗುತ್ತೆ. ನಂಬಿಸಿ ಕತ್ತು ಕುಯ್ದ ಕತೆ ಹೊರಗೆ ಬರುತ್ತೆ. ಇತಿಹಾಸದ ಗರ್ಭದಲ್ಲಿ ಅಡಗಿರುವ ಸತ್ಯದ ದರ್ಶನ ಆಗುತ್ತೆ. ಪಾಕಿಸ್ತಾನ ಎಂಬ ಕುತಂತ್ರಿ ದೇಶ ಹೇಗೆ ತನ್ನದೇ ದೇಶದ ಪ್ರಜೆಗಳಿಗೆ ವಂಚನೆ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ. ಅಲ್ಲದೇ, ಬಲೂಚಿಸ್ತಾನದಲ್ಲಿ ಪಾಕ್ ಸೇನೆ ನಡೆಸಿರುವ ಮಾನವ ಹಕ್ಕುಗಳ ಘನಘೋರ ಉಲ್ಲಂಘನೆಯ ಕುಕೃತ್ಯ ಜಗತ್ತಿನ ಎದುರು ಬಟಾಬಯಲಾಗುತ್ತೆ.
ಪಾಕಿಸ್ತಾನ ಎಂಬ ದೇಶ ಯಾವಾಗ ಉದಯಿಸಿತೋ.. ಅಂದಿನಿಂದಲೇ ಬಲೂಚಿಸ್ತಾನ ಪ್ರತ್ಯೇಕತೆಯ ಹೋರಾಟವೂ ಹುಟ್ಟಿ ಕೊಂಡಿತು. ಇದಕ್ಕೆಲ್ಲಾ ಮೂಲ ಕಾರಣ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ. ಜಿನ್ನಾ ಮಾಡಿದ ಅದೊಂದು ನಂಬಿಕೆ ದ್ರೋಹ ನೂರಾರು ಜನರ ಪ್ರಾಣಗಳನ್ನು ಇಂದಿಗೂ ಬಲಿ ತೆಗೆದುಕೊಳ್ಳುತ್ತಿದೆ. ಪಾಕಿಸ್ತಾನ ಎಂಬ ಹೆಸರು, ಪಂಜಾಬ್, ಅಫ್ಘಾನಿಯಾ, ಸಿಂಧ್, ಖೈಬರ್ ಪಕ್ತೂನ್‌ಖ್ವಾ, ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನಗಳನ್ನು ಹೆಸರಿಸುವ ಚಿಕ್ಕ ಹೆಸರು.
ಬಲೂಚಿಸ್ತಾನ ಪಾಕಿಸ್ತಾನದ ಇತರ ಪ್ರಾಂತ್ಯಗಳಿಗೆ ಹೋಲಿಸಿದರೆ ದೊಡ್ಡ ಪ್ರಾಂತ್ಯ. ಆದರೆ, ಜನಸಂಖ್ಯೆ ತೀರಾ ವಿರಳ. ಶುಷ್ಕ ವಾಯುಗುಣವನ್ನ ಹೊಂದಿರುವ ಬಲೂಚಿಸ್ತಾನದಲ್ಲಿ ಅಪಾರ ಪ್ರಮಾಣ ಖನಿಜ ಸಂಪತ್ತಿದೆ. ಈ ಖನಿಜ ಸಂಪತ್ತನ್ನು ಬಳಸಿಕೊಳ್ಳುವ ಪಾಕಿಸ್ತಾನ, ಬಲೂಚಿಸ್ತಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. 75 ವರ್ಷದಿಂದಲೂ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪಂಜಾಬಿ ಮುಸಲ್ಮಾನ ರಾಜಕಾರಣಿಗಳು ಈ ಪ್ರಾಂತ್ಯವನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಜೊತೆಗೆ ಪಾಕಿಸ್ತಾನದ ಸೇನೆ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಅಲ್ಲಿನ ಜನರ ಮೇಲೆ ಎಸಗುತ್ತಿರುವ ದೌರ್ಜನ್ಯಕ್ಕೆ ಮಿತಿಯೇ ಇಲ್ಲದಂತಾಗಿದೆ.
ಇದುವರೆಗೆ ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಸುಮಾರು 4 ಬಾರಿ ಸಂಘರ್ಷ ನಡೆದಿದೆ. 1948, 1958-59, 1962-63, 1973 ರಿಂದ 77ರವರೆಗೆ ಹೀಗೆ ನಾಲ್ಕು ಬಾರಿ ಪಾಕ್ ಸೇನೆ ವಿರುದ್ಧ ಬಲೂಚಿಗಳು ಸಶಸ್ತ್ರ ಸಂಗ್ರಾಮ ಮಾಡಿದ್ದಾರೆ. 1977ರ ಬಳಿಕ ಬಲೂಚಿಗಳು ಪ್ರತ್ಯೇಕ ಹೋರಾಟ ಕೈ ಬಿಟ್ಟಿದ್ದರು. ಆದರೆ, ಪಾಕಿಸ್ತಾನದಲ್ಲಿ ಮಿಲಿಟರಿ ಕ್ರಾಂತಿ ನಡೆಸಿ ಪರ್ವೇಜ್ ಮುಷರಽಫ್ ಅಧಿಕಾರಕ್ಕೆ ಬಂದ ಬಳಿಕ ಬಲೂಚಿಗಳು ಮತ್ತೆ ಪ್ರತ್ಯೇಕತೆಯ ಹೋರಾಟ ನಡೆಸುತ್ತಿದ್ದಾರೆ. ಮುಷರಽಫ್ ಅವಧಿಯಲ್ಲಿ ಬಲೂಚಿ ಯುವಕರನ್ನು ಅಪಹರಿಸಿ ಅಕ್ರಮವಾಗಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾದವು. ಇದರಿಂದಾಗಿ ಬಲೂಚಿಗಳು ಮತ್ತೆ ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಸಶಸ್ತ್ರ ಹೋರಾಟ ಕೈಗೊಂಡಿದ್ದಾರೆ. 2003ರಿಂದ ಶುರುವಾಗಿರುವ 5ನೇ ಬಾರಿಯ ಸಂಘರ್ಷ, 2006ರಲ್ಲಿ ಬಲೂಚಿ ಬುಡಕಟ್ಟು ನಾಯಕ ಅಕ್ಬರ್ ಖಾನ್ ಬುಗ್ಟಿಯನ್ನು ಪಾಕ್ ಸೇನೆ ಹತ್ಯೆ ಮಾಡಿದ ಬಳಿಕ ತಾರಕಕ್ಕೇರಿದೆ.
1971ರಲ್ಲಿ ಪಾಕಿಸ್ತಾನದಿಂದ ಪ್ರತ್ಯೇಕವಾದ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶ ಎಂಬ ಹೆಸರಲ್ಲಿ ಅಸ್ತಿತ್ವಕ್ಕೆ ಬಂತು. ಆಗ ಬಲೂಚಿಗಳು ಸಹ ಸಶಸ್ತ್ರ ಹೋರಾಟ ಶುರು ಮಾಡಿದ್ದರು. ಆಗ ಪಾಕ್ ಪ್ರಧಾನಿಯಾಗಿದ್ದ ಜುಲ್ಫೀಕರ್ ಅಲಿ ಭುಟ್ಟೋ ವಿರುದ್ಧ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು. ಆದರೆ, ಜುಲ್ಫೀಕರ್ ಅಲಿ ಭುಟ್ಟೋ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇರಾಕ್ ರಾಯಭಾರ ಕಚೇರಿಯಲ್ಲಿ ಬಲೂಚಿ ಪ್ರತ್ಯೇಕತಾವಾದಿಗಳಿಗೆ ಪೂರೈಸಲು ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಶೇಖರಿಸಲಾಗಿದೆ ಎಂಬ ಕಾರಣ ನೀಡಿ ಬಲೂಚಿಸ್ತಾನ ಪ್ರಾಂತ್ಯದ ಅಕ್ಬರ್ ಖಾನ್ ಬುಗ್ಟಿ ಸರ್ಕಾರವನ್ನು ವಜಾ ಮಾಡಲಾಗಿತ್ತು. ಜೊತೆಗೆ ಬಲೂಚಿಸ್ತಾನದಲ್ಲಿ ಪಾಕ್ ಸೇನಾ ಕಾರ್ಯಾಚರಣೆಗೆ ಜುಲ್ಫೀಕರ್ ಭುಟ್ಟೋ ಆದೇಶಿಸಿದ್ದರು. ಕೊನೆಗೆ ಜಿಯಾ ಉಲ್ ಹಕ್ ಮಿಲಿಟರಿ ಕ್ರಾಂತಿ ಮೂಲಕ ಅಧಿಕಾರ ವಹಿಸಿಕೊಂಡ ಬಳಿಕ 1977ರಲ್ಲಿ ಈ ಕಾರ್ಯಾಚರಣೆ ನಿಂತಿತ್ತು.
1954ರಲ್ಲಿ ಪಾಕಿಸ್ತಾನ ಏಕ ಘಟಕ ಯೋಜನೆಯನ್ನ ಜಾರಿಗೊಳಿಸಿತು. ಇದರಡಿ ಪಾಕ್‌ನ ಎಲ್ಲ ಪ್ರಾಂತ್ಯಗಳೂ ಸಮಾನ ಎಂಬ ನೀತಿಯನ್ನು ಅನುಸರಿಸಲು ಸರ್ಕಾರ ಶುರು ಮಾಡಿತು. ಇದರ ವಿರುದ್ಧ ಬಲೂಚಿಗಳು ಅನೇಕ ಬಾರಿ ಪ್ರತಿಭಟನೆ ನಡೆಸಿದರು ಸರ್ಕಾರ ಅದರ ಕುರಿತು ಯೋಚನೆ ಮಾಡಿರಲಿಲ್ಲ. ಇದರಿಂದ ಕುಪಿತರಾದ ಖಾನ್ ಆಫ್ ಕಾಲತ್ ಎಂದು ಕರೆಸಿಕೊಳ್ಳುತ್ತಿದ್ದ ನವಾಬ್ ನೌರೋಜ್ ಖಾನ್ 1958ರಲ್ಲಿ ಗೆರಿಲ್ಲಾ ಮಾದರಿಯ ಯುದ್ಧ ಆರಂಭಿಸಿದ್ದರು. ಪಾಕಿಸ್ತಾನದ ನರಿ ಬುದ್ಧಿ ಎಂತಹುದು ಎಂಬುದು ಭಾರತೀಯರಿಗೆ ಚೆನ್ನಾಗಿ ಗೊತ್ತಿದೆ ಅಲ್ಲವೇ. ಇದೇ ರೀತಿ ನರಿಬುದ್ಧಿಯನ್ನು ಉಪಯೋಗಿಸಿದ ಪಾಕಿಗಳು ನೌರೋಜ್ ಖಾನ್‌ಗೆ ಕ್ಷಮಾ ಭಿಕ್ಷೆ ನೀಡುತ್ತೇವೆ ಎಂದು ಚರ್ಚೆಗೆ ಕರೆದಿದ್ದರು. ಇದನ್ನು ನಂಬಿ ಬಂದಿದ್ದ ನೌರೋಜ್ ಖಾನ್ ಮತ್ತು ಆತನ ಮಕ್ಕಳನ್ನು ಬಂಧಿಸಿ ಜೈಲಿಗಟ್ಟಿದರು. ಅವರ ಐವರು ಸಂಬಂಧಿಕರನ್ನು ಗಲ್ಲಿಗೇರಿಸಿದರು. ಇದರಿಂದಾಗಿ ಬಲೂಚಿಗಳಲ್ಲಿ ಪ್ರತ್ಯೇಕತೆಯ ಕಿಚ್ಚು ಹೊತ್ತಿಕೊಂಡಿತು.
ಇದಾಗಿ ಐದು ವರ್ಷ ಸುಮ್ಮನಿದ್ದ ಬಲೂಚಿಗಳು, 1963ರಲ್ಲಿ ಶೇರ್ ಮೊಹಮ್ಮದ್ ಬಿರ್ಜಾನಿ ಮರಿಽ ನೇತೃತ್ವದಲ್ಲಿ ಸಶಸ್ತ್ರ ಹೋರಾಟ ಆರಂಭಿಸಿದರು. ಬಲೂಚಿಸ್ತಾನದ ಖನಿಜ ಸಂಪತ್ತಿನಿಂದ ಬರುವ ಆದಾಯದಲ್ಲಿ ತಮಗೆ ಹೆಚ್ಚು ಪಾಲು ಬರಬೇಕು ಎಂಬುದು ಇವರ ಬೇಡಿಕೆಯಾಗಿತ್ತು. ಏಕ ಘಟಕ ಯೋಜನೆ ಕೈ ಬಿಡಬೇಕು, ಬಂಧಿತ ಬಲೂಚಿ ಪ್ರತ್ಯೇಕತಾವಾದಿಗಳನ್ನು ಬಿಡುಗಡೆ ಮಾಡಬೇಕು ಎಂಬುದು ಇವರ ಉಳಿದ ಬೇಡಿಕೆಗಳಾಗಿದ್ದವು. 1969ರಲ್ಲಿ ಪಾಕ್ ಸರ್ಕಾರ ಇವರ ಬೇಡಿಕೆಗಳನ್ನ ಈಡೇರಿಸುವ ಜೊತೆಗೆ ಪ್ರತ್ಯೇಕತವಾದಿಗಳಿಗೆ ಕ್ಷಮಾ ಭಿಕ್ಷೆ ನೀಡಲು ಒಪ್ಪಿಕೊಂಡಿತು. ಆಗ ಈ ಸಶಸ್ತ್ರ ಹೋರಾಟಕ್ಕೆ ತೆರೆ ಬಿದ್ದಿತ್ತು.
ಬಲೂಚಿ ಪ್ರತ್ಯೇಕತೆಗೆ ಬೀಜ ಬಿತ್ತಿದ್ದೇ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ. ಭಾರತ-ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಬಲೂಚಿಸ್ತಾನ ಬ್ರಿಟೀಷರ ಅಧೀನದಲ್ಲಿತ್ತು. ಆಗ ಅಲ್ಲಿ ಕಾಲತ್, ಖಾರನ್, ಲಾಸ್ ಬೇಲಾ ಮತ್ತು ಮಕ್ರಾನ್ ಎಂಬ ನಾಲ್ಕು ರಾಜ ಮನೆತನಗಳು ಆಡಳಿತ ನಡೆಸುತ್ತಿದ್ದವು. ಅವರಿಗೆ ಭಾರತದ ಜೊತೆ ಅಥವಾ ಪಾಕಿಸ್ತಾನದ ಜೊತೆ ಅಥವಾ ಸ್ವತಂತ್ರವಾಗಿ ಆಡಳಿತ ನಡೆಸುವ ಆಯ್ಕೆಗಳನ್ನು ನೀಡಲಾಗಿತ್ತು. ಕಾಲತ್ ಹೊರತುಪಡಿಸಿ ಉಳಿದ ಮೂರು ರಾಜ್ಯಗಳು ಜಿನ್ನಾ ಮೋಡಿಗೆ ಒಳಗಾಗಿ ಪಾಕಿಸ್ತಾನದಲ್ಲಿ ವಿಲೀನವಾಗಲು ಒಪ್ಪಿಕೊಂಡಿದ್ದವು. ಆದರೆ, ಕಾಲತ್ ರಾಜ ಮನೆತನ ಒಪ್ಪಿರಲಿಲ್ಲ. ಬ್ರಿಟೀಷ್ ಸರ್ಕಾರದ ಬಳಿ ತನ್ನ ನಿಲುವು ತಿಳಿಸಲು ಖಾನ್ ಆಫ್ ಕಾಲತ್, 1946ರಲ್ಲಿ ಮೊಹಮ್ಮದ್ ಅಲಿ ಜಿನ್ನಾನನ್ನ ವಕಾಲತು ವಹಿಸಲು ನೇಮಿಸಿದರು. ಆಗಸ್ಟ್ 4, 1947ರಂದು ಭಾರತದ ಕೊನೆಯ ಗವರ್ನರ್ ಜನರಲ್ ಮೌಂಟ್ ಬ್ಯಾಟನ್, ಮೊಹಮ್ಮದ್ ಅಲಿ ಜಿನ್ನಾ, ಜವಾಹರ್ ಲಾಲ್ ನೆಹರು, ಖಾನ್ ಆಫ್ ಕಾಲತ್ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ ಖಾನ್ ಆಫ್ ಕಾಲತ್ ಮನವಿ ಕುರಿತು ಜಿನ್ನಾ ಪ್ರಸ್ತಾಪಿಸಿದ್ದ. ಅಲ್ಲದೇ, ಖಾರನ್ ಮತ್ತು ಲಾಸ್ ಬೇಲಾವನ್ನು ಒಳಗೊಂಡ ಕಾಲತ್ ರಾಜ್ಯ ಸ್ವತಂತ್ರ ರಾಜ್ಯವಾಗಲಿ ಎಂದು ಪ್ರತಿಪಾದಿಸಿದ್ದ. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದರು.
1947ರಲ್ಲಿ ಜಿನ್ನಾ ಪ್ರಸ್ತಾವನೆಯಂತೆ ಬಲೂಚಿಸ್ತಾನ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಆಗಲೇ ಜಿನ್ನಾ ದೊಡ್ಡ ಪ್ಲ್ಯಾನ್ ಮಾಡಿದ್ದ. 1947ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನದಲ್ಲಿ ಕಾಲತ್ ವಿಲೀನಗೊಳಿಸುವ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಖಾನ್ ಆಫ್ ಕಾಲತ್ ಬಳಿ ಜಿನ್ನಾ ಕೇಳಿದ್ದ. ಯಾವುದೇ ಕಾರಣಕ್ಕೂ ಪಾಕಿಸ್ತಾನದಲ್ಲಿ ಕಾಲತ್ ವಿಲೀನಕ್ಕೆ ಸಮ್ಮತಿ ಸೂಚಿಸಲ್ಲ ಎಂದು ಖಾನ್ ಆಫ್ ಕಾಲತ್ ಖಂಡತುಂಡವಾಗಿ ಕಡ್ಡಿ ಮುರಿದಂತೆ ಹೇಳಿದ್ರು. ಇದಾದ ಬಳಿಕ ತನ್ನ ನೆರವಿಗೆ ಬನ್ನಿ ಎಂದು ಭಾರತ ಸೇರಿ ಹಲವಾರು ದೇಶಗಳಿಗೆ ಖಾನ್ ಮನವಿ ಮಾಡಿದ್ದರು. ಆದರೆ, ಯಾರೂ ಅವರ ನೆರವಿಗೆ ಬರದ ಕಾರಣ ಪಾಕಿಸ್ತಾನಕ್ಕೆ ಶರಣಾದರು. 1948ರ ಮಾರ್ಚ್‌ನಲ್ಲಿ ಪಾಕಿಸ್ತಾನ ಸೇನೆ ಕಾಲತ್‌ನ ಸಮುದ್ರ ತೀರವನ್ನು ತಲುಪಿತ್ತು. ಕೊನೆಗೆ ಖಾನ್ ಆಫ್ ಕಾಲತ್ ಜಿನ್ನಾ ಒಡ್ಡಿದ್ದ ಷರತ್ತುಗಳನ್ನು ಒಪ್ಪಿ, ಪಾಕಿಸ್ತಾನದಲ್ಲಿ ಕಾಲತ್ ವಿಲೀನಕ್ಕೆ ಒಪ್ಪಿಗೆ ನೀಡಿದ್ದರು. ಇದರ ವಿರುದ್ಧ ಅವರ ಸಹೋದರ ಅಬ್ದುಲ್ ಕರೀಂ ಸಿಡಿದೆದ್ದಿದ್ದರು. ಅವರ ದಂಗೆಯನ್ನು ಕೆಲವೇ ದಿನಗಳಲ್ಲಿ ಅಡಗಿಸಲಾಯಿತು. ಈ ದಂಗೆಯಿಂದಾಗಿ ಬಲೂಚಿಗಳಲ್ಲಿ ಪ್ರತ್ಯೇಕ ರಾಷ್ಟ್ರೀಯತೆಯ ಭಾವನೆ ಬೆಳೆದು ಬರುವಂತಾಗಿದ್ದು, ಈಗ ಸಶಸ್ತ್ರ ಹೋರಾಟ ಆರಂಭಿಸಿದ್ದಾರೆ.
ಚಂದ್ರಮೋಹನ್ ಕೋಲಾರ, ಗ್ಯಾರಂಟಿ ನ್ಯೂಸ್.