ಕಳೆದ ವಾರದಿಂದ ಏಷ್ಯಾದ ಹಲವು ದೇಶಗಳನ್ನು ಅಪ್ಪಳಿಸಿರುವ ಧಾರಾಕಾರ ಮಳೆಯಿಂದ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತಗಳು ಸಾವಿರಾರು ಜನರ ಜೀವವನ್ನು ಬಲಿ ತೆಗೆದುಕೊಂಡಿವೆ. ಇಂಡೋನೇಷ್ಯಾ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ಮಲೇಷ್ಯಾಗಳಲ್ಲಿ ದೇಶಗಳಲ್ಲಿ ಒಟ್ಟು1,400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ. ಇದರ ಜೊತೆಗೆ ಸಾವಿರಕ್ಕೂ ಹೆಚ್ಚು ಜನರು ಇನ್ನೂ ಕಾಣೆಯಾಗಿದ್ದಾರೆ.
ಈ ಪ್ರಕೃತಿ ವಿಕೋಪದಲ್ಲಿ ಇಂಡೋನೇಷ್ಯಾ ಅತ್ಯಂತ ತೀವ್ರ ಹೊಡೆತಕ್ಕೆ ಒಳಗಾಗಿದೆ. ಅಲ್ಲಿನ ಸುಮಾತ್ರಾ ಮತ್ತು ಜಾವಾ ದ್ವೀಪಗಳಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ ಕನಿಷ್ಠ 753 ಜನರು ಸಾವನ್ನಪ್ಪಿದ್ದಾರೆ. ನೂರಾರು ಗ್ರಾಮಗಳು ಮಣ್ಣಿನಡಿ ಹೂತುಹೋಗಿವೆ. ರಕ್ಷಣಾ ತಂಡಗಳು ಇನ್ನೂ ಅನೇಕ ಕಡೆಗಳನ್ನು ತಲುಪಲು ಸಾಧ್ಯವಾಗದೇ ಪ್ರಯತ್ನಿಸುತ್ತಿವೆ. ವಿದ್ಯುತ್, ದೂರವಾಣಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಶ್ರೀಲಂಕಾ ಎರಡನೇ ಅತಿ ಹೆಚ್ಚು ಪೀಡಿತ ದೇಶ. ಇಲ್ಲಿ ಕನಿಷ್ಠ 465 ಮಂದಿ ಮೃತಪಟ್ಟಿದ್ದು, ಇನ್ನೂ ನಿಖರ ಸಾವಿನ ಸಂಖ್ಯೆ ದೃಢಪಡಿಸಲಾಗಿಲ್ಲ ಎಂದು ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಹೇಳಿದ್ದಾರೆ. ಮಧ್ಯ ಮತ್ತು ಪೂರ್ವ ಪ್ರದೇಶಗಳು ತೀವ್ರ ಪ್ರವಾಹಕ್ಕೆ ತತ್ತರಿಸಿವೆ.
ಥೈಲ್ಯಾಂಡ್‌ನ ದಕ್ಷಿಣ ಭಾಗದಲ್ಲಿ 185 ಜನರು ಸಾವನ್ನಪ್ಪಿದ್ದಾರೆ. ಮಲೇಷ್ಯಾದಲ್ಲಿ ಈ ಸಂಖ್ಯೆ ಇನ್ನೂ ಕಡಿಮೆಯಿದ್ದು, ಅಧಿಕೃತವಾಗಿ 3 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇನ್ನೂ ಅನೇಕ ಪ್ರದೇಶಗಳಿಂದ ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ.
ಇಂಡೋನೇಷ್ಯಾದ ಹೊಸ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸೋಮವಾರ ವಿಪತ್ತು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪುನರ್ನಿರ್ಮಾಣ ಮತ್ತು ಪರಿಹಾರ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಆದರೆ ಇನ್ನೂ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿಲ್ಲ, ಅಂತರರಾಷ್ಟ್ರೀಯ ಸಹಾಯ ಕೋರಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಶ್ರೀಲಂಕಾ ಸರ್ಕಾರವು ಈಗಾಗಲೇ ಅಂತರರಾಷ್ಟ್ರೀಯ ಸಹಾಯ ಕೋರಿದ್ದು, ಪ್ರಧಾನಿ ಹರಿಣಿ ಅಮರಸೂರ್ಯ ಅವರು ವಿದೇಶಿ ರಾಯಭಾರಿಗಳನ್ನು ಭೇಟಿಯಾಗಿ ಸಹಾಯ ಕೇಳಿಕೊಂಡಿದ್ದಾರೆ.
ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ತಮ್ಮ ಬಲಿಷ್ಠ ಆರ್ಥಿಕತೆ ಮತ್ತು ಸೇನಾ ಸಾಮರ್ಥ್ಯದಿಂದ ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಹೆಲಿಕಾಪ್ಟರ್‌ಗಳು, ಸೇನಾ ದಳಗಳು, ತುರ್ತು ನಿಧಿಗಳನ್ನು ತಕ್ಷಣ ನಿಯೋಜಿಸಲಾಗಿದೆ. ಆದರೆ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಈ ವಿಪತ್ತನ್ನು ಎದುರಿಸುತ್ತಿದ್ದು, ಅಂತರರಾಷ್ಟ್ರೀಯ ಸಹಾಯ ಅನಿವಾರ್ಯವಾಗಿದೆ.
