ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ; ತಪ್ಪಿತಸ್ಥರನ್ನು ಬಿಡಲ್ಲ ಎಂದ ಡಿಸಿಎಂ ಶಿಂಧೆ, ಫೋಟೊ ವೈರಲ್!

Untitled design (92)

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದ್ದು, ಮುಂಬೈನ ಜುಹು ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಭಾನುವಾರ ಸಂಜೆ ಫುಟ್‌ಬಾಲ್ ಮೈದಾನದಿಂದ ಹೊರಡುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನಟನ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯ ಬಳಿಕ ಟೈಗರ್ ಶ್ರಾಫ್ ಅವರ ಮೊದಲ ಫೋಟೊ ಹೊರಬಂದಿದ್ದು, ಅವರ ಬಲಗೈಗೆ ಬ್ಯಾಂಡೇಜ್ ಕಟ್ಟಿರುವುದು ಹಾಗೂ ಭುಜ ಮತ್ತು ಎದೆಯ ಭಾಗದಲ್ಲಿ ಗಾಯಗಳಿಗೆ ಡ್ರೆಸ್ಸಿಂಗ್ ಮಾಡಿರುವುದು ಕಂಡುಬಂದಿದೆ.

ಈ ಘಟನೆಯಿಂದ ಬಾಲಿವುಡ್ ನಲ್ಲಿ ಆತಂಕ ಸೃಷ್ಟಿಯಾಗಿದ್ದು, ನಟನ ಆರೋಗ್ಯದ ಕುರಿತು ಅಭಿಮಾನಿಗಳು ಮಾಹಿತಿ ತಿಳಿದುಕೊಳ್ಳಲು ಕಾತರರಾಗಿದ್ದಾರೆ. ಅದೃಷ್ಟವಶಾತ್ ಟೈಗರ್ ಶ್ರಾಫ್ ಸುರಕ್ಷಿತವಾಗಿದ್ದಾರೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.

ಟೈಗರ್ ಶ್ರಾಫ್ ನಿವಾಸಕ್ಕೆ ಡಿಸಿಎಂ ಶಿಂಧೆ ಭೇಟಿ

ಗುಂಡಿನ ದಾಳಿ ನಡೆದ ಬಳಿಕ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾನುವಾರ ತಡರಾತ್ರಿ ಟೈಗರ್ ಶ್ರಾಫ್ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ನಟ ಮತ್ತು ಅವರ ಕುಟುಂಬದವರಿಗೆ ಧೈರ್ಯ ತುಂಬಿರುವ ಅವರು, ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಂಧೆ, ಗುಂಡಿನ ದಾಳಿಯಿಂದ ಟೈಗರ್ ಅವರ ಬಲಗೈಗೆ ಗಾಯಗಳಾಗಿವೆ ಎಂದು ತಿಳಿಸಿದರು. ಬಂದೂಕಿನ ಮದ್ದು ಮತ್ತು ಗಾಜಿನ ಚೂರುಗಳಿಂದ ಗಾಯಗಳಾಗಿರುವುದಾಗಿ ಅವರು ವಿವರಿಸಿದರು. ಘಟನೆಯಲ್ಲಿ ನಟನ ಚಾಲಕನಿಗೂ ಗಾಯಗಳಾಗಿದ್ದು, ನಟ ಮತ್ತು ಅವರ ತಾಯಿ ಆತಂಕಕ್ಕೊಳಗಾಗಿದ್ದಾರೆ ಎಂದು ಹೇಳಿದರು.

ಗುಂಡು ಹಾರಿಸಿದ ದುಷ್ಕರ್ಮಿಗಳು

ಮಾಹಿತಿಯ ಪ್ರಕಾರ, ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಐದು ಸುತ್ತು ಗುಂಡು ಹಾರಿಸಲಾಗಿದೆ ಎಂದು ಶಿಂಧೆ ತಿಳಿಸಿದ್ದಾರೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಘಟನೆಯಲ್ಲಿ ನಟನ ಚಾಲಕನ ಜೊತೆಗೆ ಆಟೋರಿಕ್ಷಾ ಚಾಲಕರೊಬ್ಬರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದವರ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಗ್ಯಾಂಗ್‌ವಾರ್‌ಗಳನ್ನು ಸಹಿಸುವುದಿಲ್ಲ’

ಮುಂಬೈನಲ್ಲಿ ಇಂತಹ ಗ್ಯಾಂಗ್‌ವಾರ್‌ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಎಚ್ಚರಿಕೆ ನೀಡಿದ್ದಾರೆ. ನಟ ಮತ್ತು ಅವರ ಕುಟುಂಬಕ್ಕೆ ಸರ್ಕಾರದ ಬೆಂಬಲವಿದೆ ಎಂದು ಭರವಸೆ ನೀಡಿರುವ ಅವರು, ಸಾರ್ವಜನಿಕರನ್ನು ಬೆದರಿಸುವ ಹಾಗೂ ಭಯದ ವಾತಾವರಣ ಸೃಷ್ಟಿಸುವ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

1990ರ ದಶಕದಲ್ಲಿ ಮುಂಬೈನಲ್ಲಿ ಗ್ಯಾಂಗ್‌ವಾರ್‌ಗಳು ಸಾಮಾನ್ಯವಾಗಿದ್ದವು. ಆದರೆ, ನಂತರ ಪೊಲೀಸರು ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರು ಎಂದು ಶಿಂಧೆ ನೆನಪಿಸಿಕೊಂಡಿದ್ದಾರೆ. ಮತ್ತೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ದಾಳಿಗೆ ಬಳಸಿದ ಬೈಕ್ ವಶಕ್ಕೆ ಪಡೆದ ಪೊಲೀಸರು

ಘಟನೆಯ ತನಿಖೆಯನ್ನು ಚುರುಕುಗೊಳಿಸಿರುವ ಮುಂಬೈ ಪೊಲೀಸರು, ದಾಳಿಗೆ ಬಳಸಲಾಗಿದೆ ಎನ್ನಲಾದ ದ್ವಿಚಕ್ರ ವಾಹನವನ್ನು ಅಂಧೇರಿ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ. ಜುಹು ಪ್ರದೇಶದಲ್ಲಿ ದಾಳಿ ನಡೆಸಿದ ಬಳಿಕ ಆರೋಪಿಗಳು ಬೈಕ್‌ನಲ್ಲಿ ಅಂಧೇರಿಗೆ ತೆರಳಿ, ಅಲ್ಲಿಂದ ರೈಲು ಹತ್ತಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.

ಸದ್ಯ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ. ಬೈಕ್‌ನ ಮಾಲೀಕತ್ವ, ಆರೋಪಿಗಳ ಪ್ರಯಾಣದ ಮಾರ್ಗ ಹಾಗೂ ಘಟನೆಯ ಹಿಂದಿನ ಉದ್ದೇಶ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುವ ಸಾಧ್ಯತೆಯಿದೆ.

 

Exit mobile version