ಗೌಟೆಂಗ್: ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದಲ್ಲಿ ತಡರಾತ್ರಿ ಭೀಕರ ಗುಂಡಿನ ದಾಳಿ ನಡೆದಿದೆ. ಜೋಹಾನ್ಸ್‌ಬರ್ಗ್‌ನ ನೈಋತ್ಯದಲ್ಲಿರುವ ವೆಡೆಲಾದ ವೆಸ್ಟ್ ರಾಂಡ್ ಪ್ರದೇಶದಲ್ಲಿನ ಬಾರ್‌ವೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 17 ಮಂದಿ ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಸುಮಾರು 9:30ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾರ್‌ನಲ್ಲಿ ಗ್ರಾಹಕರು ಇದ್ದ ಸಂದರ್ಭದಲ್ಲಿ ಶಸ್ತ್ರಸಜ್ಜಿತ ಶಂಕಿತರು ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟವರಲ್ಲಿ 13 ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾರ್ ಹೊರಗಿನಿಂದ ಆರಂಭವಾದ ದಾಳಿ
ಪೊಲೀಸರ ಮಾಹಿತಿಯ ಪ್ರಕಾರ, ಶಂಕಿತರು ಬಾರ್‌ನ ಹೊರಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ಗ್ರಾಹಕರ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಬಾರ್‌ನೊಳಗೆ ನುಗ್ಗಿ ಅಲ್ಲಿದ್ದವರ ಮೇಲೂ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರು AK-47 ರೈಫಲ್‌ಗಳು ಮತ್ತು ಪಿಸ್ತೂಲ್‌ಗಳನ್ನು ಹೊಂದಿದ್ದರು ಎನ್ನಲಾಗಿದೆ. ಏಕಾಏಕಿ ನಡೆದ ಗುಂಡಿನ ದಾಳಿಯಿಂದ ಸ್ಥಳದಲ್ಲಿದ್ದ ಗ್ರಾಹಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಹಲವರು ಪ್ರಾಣ ಉಳಿಸಿಕೊಳ್ಳಲು ಓಡಿಹೋಗಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಗುಂಡಿನ ದಾಳಿಯ ನಂತರ ಸ್ಥಳಕ್ಕೆ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಧಾವಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ದಾಳಿಯ ಹಿಂದಿನ ಕಾರಣ ನಿಗೂಢ
ಈ ಭೀಕರ ದಾಳಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ದಕ್ಷಿಣ ಆಫ್ರಿಕಾ ಪೊಲೀಸ್ ಇಲಾಖೆ ತಿಳಿಸಿದೆ. ವೈಯಕ್ತಿಕ ದ್ವೇಷ, ಗ್ಯಾಂಗ್‌ಗಳ ನಡುವಿನ ಸಂಘರ್ಷ ಅಥವಾ ಬೇರೆ ಯಾವುದೇ ಕಾರಣಕ್ಕೆ ದಾಳಿ ನಡೆದಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಕುರಿತು ದಕ್ಷಿಣ ಆಫ್ರಿಕಾ ಪೊಲೀಸ್ ಇಲಾಖೆ ತನ್ನ ಅಧಿಕೃತ X ಖಾತೆಯ ಮೂಲಕವೂ ಮಾಹಿತಿ ಹಂಚಿಕೊಂಡಿದೆ.
8 ಶಂಕಿತರಿಗಾಗಿ ಪೊಲೀಸರ ಶೋಧ
ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಎಂಟು ಶಂಕಿತರನ್ನು ಪತ್ತೆಹಚ್ಚಿ ಬಂಧಿಸಲು ದಕ್ಷಿಣ ಆಫ್ರಿಕಾ ಪೊಲೀಸ್ ಇಲಾಖೆ (SAPS) ಕಾರ್ಯಾಚರಣೆ ಆರಂಭಿಸಿದೆ. ಶಂಕಿತರು ಬಳಸಿದ ವಾಹನ, ಶಸ್ತ್ರಾಸ್ತ್ರಗಳು ಹಾಗೂ ದಾಳಿಯ ನಂತರ ಅವರು ತೆರಳಿರುವ ಸಾಧ್ಯತೆ ಇದ್ದು ಮಾರ್ಗಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಪ್ರತ್ಯಕ್ಷದರ್ಶಿಗಳು ಹಾಗೂ ಗಾಯಾಳುಗಳಿಂದ ಮಾಹಿತಿ ಪಡೆಯುವ ಪ್ರಕ್ರಿಯೆಯೂ ನಡೆಯುತ್ತಿದೆ.
