ರೇಣುಕಾಸ್ವಾಮಿ ಕೇಸ್: ಪ್ರದೋಷ್‌ಗೆ ತಾತ್ಕಾಲಿಕ ರಿಲೀಫ್

ಘೋಷಣೆ (4)

ಬೆಂಗಳೂರು:  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ತಂದೆಯ ವಾರ್ಷಿಕ ಪುಣ್ಯಸ್ಮರಣೆ ಹಾಗೂ ಪಿತೃಕಾರ್ಯದಲ್ಲಿ ಪಾಲ್ಗೊಳ್ಳಲು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ, ನವೆಂಬರ್ 7ರಿಂದ 12ರವರೆಗೆ ಆರು ದಿನಗಳ ಕಾಲ ಷರತ್ತುಬದ್ಧ ಅನುಮತಿ ನೀಡಿದೆ.

ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ತಂದೆಯ ಪಿತೃಕಾರ್ಯದಲ್ಲಿ ಭಾಗವಹಿಸಲು 20 ದಿನಗಳ ಕಾಲ ಮಧ್ಯಂತರ ಜಾಮೀನು ನೀಡುವಂತೆ ಪ್ರದೋಷ್ ಪರ ವಕೀಲರು ಮನವಿ ಮಾಡಿದ್ದರು. ಆದರೆ, ನ್ಯಾಯಾಲಯವು 20 ದಿನಗಳ ಬದಲಿಗೆ ಆರು ದಿನಗಳ ಕಾಲಾವಕಾಶವನ್ನಷ್ಟೇ ನೀಡಿದೆ. ಈ ಅವಧಿಯಲ್ಲಿ ಪ್ರದೋಷ್ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಬೇಕು ಎಂದು ಸೂಚಿಸಿದೆ.

ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ಅವಕಾಶ

ನ್ಯಾಯಾಲಯದ ಆದೇಶದ ಪ್ರಕಾರ, ನವೆಂಬರ್ 7ರಿಂದ 12ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಪ್ರದೋಷ್ ಅವರನ್ನು ಜೈಲಿನಿಂದ ಪಿತೃಕಾರ್ಯ ನಡೆಯುವ ಸ್ಥಳಕ್ಕೆ ಕರೆದೊಯ್ಯಬೇಕು. ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಸಂಜೆ 6 ಗಂಟೆಯೊಳಗೆ ಮತ್ತೆ ಜೈಲಿಗೆ ವಾಪಸ್ ಕರೆತರಬೇಕು. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಪೊಲೀಸ್ ಭದ್ರತೆ ಕಡ್ಡಾಯವಾಗಿರಲಿದೆ.

ಪಿತೃಕಾರ್ಯದಲ್ಲಿ ಪಾಲ್ಗೊಳ್ಳಲು ಬರುವ ಪುರೋಹಿತರ ಹೆಸರು ಹಾಗೂ ಅವರ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಇದೇ ರೀತಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಕುಟುಂಬದ ಸದಸ್ಯರು, ಆಪ್ತರು ಹಾಗೂ ಬಂಧುಗಳ ಹೆಸರಿನ ಪಟ್ಟಿಯನ್ನೂ ಮುಂಚಿತವಾಗಿಯೇ ಕೋರ್ಟ್‌ಗೆ ನೀಡಬೇಕಾಗಿದೆ.

ಪ್ರಕರಣದ ಆರೋಪಿಗಳು, ಸಾಕ್ಷಿಗಳ ಸಂಪರ್ಕಕ್ಕೆ ನಿರ್ಬಂಧ

ಪ್ರದೋಷ್‌ಗೆ ನೀಡಿರುವ ತಾತ್ಕಾಲಿಕ ಅನುಮತಿಯ ಸಂದರ್ಭದಲ್ಲಿ ನ್ಯಾಯಾಲಯ ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯನ್ನು ಅವರು ಭೇಟಿಯಾಗುವಂತಿಲ್ಲ. ಪ್ರಕರಣದ ಇತರ ಆರೋಪಿಗಳು, ಸಾಕ್ಷಿಗಳು ಅಥವಾ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಸಾಧಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.

ನ್ಯಾಯಾಲಯ ವಿಧಿಸಿರುವ ಎಲ್ಲ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನುಮತಿಸಿದ ಸ್ಥಳ ಮತ್ತು ಸಮಯದ ಹೊರತಾಗಿ ಬೇರೆಡೆಗೆ ತೆರಳುವಂತಿಲ್ಲ. ಪೊಲೀಸ್ ಭದ್ರತೆಯಲ್ಲಿಯೇ ಪಿತೃಕಾರ್ಯದಲ್ಲಿ ಭಾಗವಹಿಸಿ, ನಿಗದಿತ ಸಮಯಕ್ಕೆ ಜೈಲಿಗೆ ಮರಳಬೇಕು ಎಂಬ ಸೂಚನೆ ನೀಡಲಾಗಿದೆ.

ದರ್ಶನ್ ಪರ ವಕೀಲರಿಂದ ತೀವ್ರ ಆಕ್ಷೇಪ

ಪ್ರದೋಷ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಗೆ ನಟ ದರ್ಶನ್ ಪರ ವಕೀಲ ಹಸ್ಮತ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಕರಣದ ವಿಚಾರಣೆಯಲ್ಲಿ ಪ್ರದೋಷ್ ಅವರ ಅಡ್ಡಪರೀಕ್ಷೆ (ಕ್ರಾಸ್ ಎಗ್ಸಾಮಿನೇಷನ್) ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಮಧ್ಯಂತರ ಜಾಮೀನು ನೀಡುವುದು ಸೂಕ್ತವಲ್ಲ ಎಂಬ ವಾದವನ್ನು ಅವರು ಮಂಡಿಸಿದ್ದರು.

ಪ್ರದೋಷ್ ಅವರ ಸಾಕ್ಷ್ಯ ವಿಚಾರಣೆ ಹಾಗೂ ಪ್ರಕರಣದ ಮುಂದಿನ ಪ್ರಕ್ರಿಯೆಗಳ ಹಿನ್ನೆಲೆ ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೆ, ತಂದೆಯ ವಾರ್ಷಿಕ ಪುಣ್ಯಸ್ಮರಣೆಯ ಧಾರ್ಮಿಕ ಕರ್ತವ್ಯದಲ್ಲಿ ಭಾಗವಹಿಸುವ ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಕಠಿಣ ಷರತ್ತುಗಳೊಂದಿಗೆ ಆರು ದಿನಗಳ ತಾತ್ಕಾಲಿಕ ಅನುಮತಿ ನೀಡಿದೆ.

ಯಾರು ಈ ಪ್ರದೋಷ್?

ನಟ ದರ್ಶನ್‌ಗೆ ಆಪ್ತರಾಗಿದ್ದ ಪ್ರದೋಷ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರಂಭದಲ್ಲಿ 14ನೇ ಆರೋಪಿಯಾಗಿದ್ದರು. ಬಳಿಕ ಪ್ರಕರಣದ ಕುರಿತು ಸಂಪೂರ್ಣ ಸತ್ಯಾಂಶವನ್ನು ಬಹಿರಂಗಪಡಿಸುವುದಾಗಿ ತಿಳಿಸಿ ಮಾಫಿ ಸಾಕ್ಷಿಯಾಗಲು ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ಪ್ರಕ್ರಿಯೆಯ ಬಳಿಕ ಅವರಿಗೆ ಮಾಫಿ ಸಾಕ್ಷಿಯ ಸ್ಥಾನಮಾನ ನೀಡಲಾಗಿತ್ತು.

 

Exit mobile version