ಬಿಗ್‌ಬಾಸ್‌ನಿಂದ ಹೊರಬಂದರೂ ಮನಸ್ಸು ಅಲ್ಲೇ ಉಳಿದಿದೆ: ರಕ್ಷಿತಾ ಶೆಟ್ಟಿ ಭಾವುಕ ಪೋಸ್ಟ್‌

ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ: BBK 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಭಾವುಕ ಪೋಸ್ಟ್‌

Untitled design 2026 02 03T105857.114

ಬಿಗ್‌ಬಾಸ್ ಕನ್ನಡ ಸೀಸನ್ 12 ಮುಗಿದು ಹಲವು ದಿನಗಳಾದರೂ, ಆ ಮನೆಯ ನೆನಪುಗಳು ಇನ್ನೂ ರನ್ನರ್ ಅಪ್ ರಕ್ಷಿತಾ ಶೆಟ್ಟಿಯ ಮನಸ್ಸಿನಲ್ಲಿ ಜೀವಂತವಾಗಿವೆ. ಶೋ ಮುಗಿದ ನಂತರ ನಿರಂತರ ಕಾರ್ಯಕ್ರಮಗಳು, ಸಂದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ರಕ್ಷಿತಾ ಶೆಟ್ಟಿ ಇದೀಗ ಸ್ವಲ್ಪ ಫ್ರೀ ಆಗಿದ್ದು, ಈ ವೇಳೆ ತಮ್ಮ ಬಿಗ್‌ಬಾಸ್ ಪಯಣವನ್ನು ನೆನಪಿಸಿಕೊಂಡು ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ರಕ್ಷಿತಾ ಶೆಟ್ಟಿ ತಮ್ಮ ಪೋಸ್ಟ್‌ನಲ್ಲಿ ಬಿಗ್‌ಬಾಸ್ ಮನೆಯ ಕೊನೆಯ ದಿನವನ್ನು ತಮ್ಮ ಜೀವನದಲ್ಲಿ ಎಂದಿಗೂ ಮರೆತೇ ಹೋಗಲಾಗದ ಕ್ಷಣ ಎಂದು ವಿವರಿಸಿದ್ದಾರೆ. ಮೂರು ತಿಂಗಳ ಕಾಲ ಆ ಮನೆಯೊಳಗೆ ಅನುಭವಿಸಿದ ಪ್ರತಿಯೊಂದು ಭಾವನೆ ಕೂಡ ತಮ್ಮ ಬದುಕಿನ ಅಮೂಲ್ಯ ಭಾಗವಾಗಿದೆ ಎಂದು ಹೇಳಿದ್ದಾರೆ. ಸಂತೋಷ, ಕಣ್ಣೀರು, ನೋವು, ಅಸೂಯೆ, ಪ್ರೀತಿ ಮತ್ತು ಸ್ವಯಂ ಬೆಳವಣಿಗೆ ಎಲ್ಲವೂ ಆ ಮನೆಯೊಳಗೆ ಅನುಭವಿಸಿದ ಕ್ಷಣಗಳೇ ಎಂದು ಅವರು ಮನಮುಟ್ಟುವ ರೀತಿಯಲ್ಲಿ ಬರೆದುಕೊಂಡಿದ್ದಾರೆ.

ಆರಂಭದಲ್ಲಿ ಕೇವಲ ಒಂದು ಸ್ಪರ್ಧೆಯಾಗಿ ಶುರುವಾದ ಬಿಗ್‌ಬಾಸ್ ಮನೆ, ದಿನಗಳು ಕಳೆದಂತೆ ನಿಜವಾದ ಮನೆಯಂತೆಯೇ ಆಗಿಬಿಟ್ಟಿತು ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ. ಭಾವನೆಗಳು, ಬಾಂಧವ್ಯಗಳು ಹಾಗೂ ಅನೇಕ ಮರೆಯಲಾಗದ ನೆನಪುಗಳಿಂದ ಕಟ್ಟಿದ ಮನೆ ಅದು. ಪ್ರತಿಯೊಬ್ಬ ಸ್ಪರ್ಧಿಯೂ ಒಂದೊಂದು ರೀತಿಯಲ್ಲಿ ತಮ್ಮ ಜೀವನಕ್ಕೆ ಪಾಠ ಕಲಿಸಿದರು ಎಂಬುದನ್ನು ಅವರು ಸ್ಮರಿಸಿದ್ದಾರೆ.

ಬಿಗ್‌ಬಾಸ್ ಮನೆಯ ಪಯಣವು ಕೇವಲ ಆಟವಲ್ಲ, ಅದು ತಮ್ಮ ಜೀವನದ ಒಂದು ಮಹತ್ವದ ಅಧ್ಯಾಯವಾಗಿದೆ ಎಂದು ರಕ್ಷಿತಾ ಸ್ಪಷ್ಟಪಡಿಸಿದ್ದಾರೆ. ಈ ಅವಧಿಯಲ್ಲಿ ಅವರು ಅನೇಕ ಅಮೂಲ್ಯ ಸಂಬಂಧಗಳನ್ನು ಕಟ್ಟಿಕೊಂಡಿದ್ದಾರೆ. ಹಲವು ಅಣ್ಣಂದಿರು, ಸ್ನೇಹಿತರು ಹಾಗೂ ಹೃದಯಕ್ಕೆ ಹತ್ತಿರವಾದ ಬಾಂಧವ್ಯಗಳು ತಮ್ಮ ಜೀವನಪೂರ್ತಿ ಉಳಿಯಲಿವೆ ಎಂದು ಅವರು ಹೇಳಿದ್ದಾರೆ.

ಶೋನ ನಿರೂಪಕ ಕಿಚ್ಚ ಸುದೀಪ್ ಮನೆಗೆ ಪ್ರವೇಶಿಸಿದ ಕ್ಷಣ ತಮ್ಮ ಮನಸ್ಸಿಗೆ ಅಪಾರ ಸಂತೋಷ ತಂದಿತು ಎಂದು ರಕ್ಷಿತಾ ನೆನಪಿಸಿಕೊಂಡಿದ್ದಾರೆ. ಆದರೆ ಅದೇ ಮನೆ ಬಿಟ್ಟು ಹೊರಡುವ ಕ್ಷಣ, ತಮ್ಮ ಜೀವನದ ಅತ್ಯಂತ ಕಠಿಣ ಹಾಗೂ ನೋವಿನ ಸಮಯಗಳಲ್ಲಿ ಒಂದಾಗಿತ್ತು ಎಂದು ಅವರು ಹೇಳಿದ್ದಾರೆ. ಆ ಕ್ಷಣದ ನೋವು ಇಂದಿಗೂ ತಮ್ಮ ಮನಸ್ಸಿನಲ್ಲಿ ಉಳಿದಿದೆ ಎಂದರು.

“ಕೆಲವು ಸ್ಥಳಗಳು ನಮ್ಮನ್ನು ಬಿಟ್ಟು ಹೋಗಲು ಬಿಡುವುದಿಲ್ಲ. ಅವು ನಮ್ಮೊಳಗೇ ಉಳಿದುಬಿಡುತ್ತವೆ”. ಬಿಗ್‌ಬಾಸ್ ಮನೆ ಅಂಥದ್ದೇ ಒಂದು ಸ್ಥಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಈ ಪಯಣದಲ್ಲಿ ಬೆಂಬಲ ನೀಡಿದ ಜನರಿಗೆ ರಕ್ಷಿತಾ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಮನೆಯ ಹೊರಗಿದ್ದ ತಮ್ಮ ಅಭಿಮಾನಿಗಳ ಪ್ರೀತಿ, ಬೆಂಬಲ, ಪ್ರಾರ್ಥನೆಗಳು ಹಾಗೂ ಮತಗಳೇ ತಮ್ಮ ಶಕ್ತಿಯಾಗಿದ್ದವು ಎಂದು ಅವರು ಹೇಳಿದ್ದಾರೆ. ಆ ಕಾರಣದಿಂದಲೇ ತಾವು ಅಷ್ಟು ದೂರ ಬಿಗ್‌ಬಾಸ್ ಮನೆಯಲ್ಲಿ ಉಳಿಯಲು ಸಾಧ್ಯವಾಯಿತು ಎಂದು ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ.

“ಯಾವತ್ತೂ ಕೃತಜ್ಞತೆ. ಯಾವತ್ತೂ ನೆನಪುಗಳು” ಎಂಬ ಸಾಲುಗಳೊಂದಿಗೆ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿರುವ ರಕ್ಷಿತಾ ಶೆಟ್ಟಿ, ಅಭಿಮಾನಿಗಳ ಹೃದಯದಲ್ಲಿ ಮತ್ತೊಮ್ಮೆ ವಿಶೇಷ ಸ್ಥಾನ ಪಡೆದಿದ್ದಾರೆ..

Exit mobile version