ಸರ್ಕಾರಿ ವೇತನ ಪಡೆದು ಪಿಜಿ ಅಧ್ಯಯನ ಆರೋಪ: ವಿಚಾರಣೆಗೆ ಗೈರಾದ ಶಾಸಕ ಮೇಟಿ ಸೊಸೆ

Your paragraph text 2026 09 16T165717.310

ಬಾಗಲಕೋಟೆ: ಸರ್ಕಾರಿ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೆಡಿಕಲ್ ಪಿಜಿ ವ್ಯಾಸಂಗ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯೆ ಡಾ. ಅಂಕಿತಾ ಯರಗಲ್ ವಿಚಾರಣೆಗೆ ಗೈರಾಗಿದ್ದಾರೆ. ಸರ್ಕಾರಿ ಸೇವೆಯ ಜೊತೆಗೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ನಡೆಸುತ್ತಿರುವುದು ನಿಯಮ ಉಲ್ಲಂಘನೆಯೇ ಎಂಬ ವಿಚಾರ ಇದೀಗ ಜಿಲ್ಲಾಡಳಿತದ ಪರಿಶೀಲನೆಯಲ್ಲಿದೆ.

ಡಾ. ಅಂಕಿತಾ ಯರಗಲ್ ಅವರು ಬಾಗಲಕೋಟೆ ನವನಗರದ ವಾಂಬೆ ಕಾಲೊನಿಯ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯಕ್ಕೆ ಗೈರಾಗಿರುವುದು ಹಾಗೂ ಇದೇ ಅವಧಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಆರೋಪದ ಹಿನ್ನೆಲೆ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಡಾ. ಅಂಕಿತಾ ಅವರು ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಅವರ ಸೊಸೆ ಎಂಬ ಮಾಹಿತಿ ಕೂಡ ಪ್ರಕರಣದ ರಾಜಕೀಯ ಹಿನ್ನೆಲೆಗೆ ಕಾರಣವಾಗಿದೆ.

2025ರಲ್ಲಿ ವೈದ್ಯಾಧಿಕಾರಿಯಾಗಿ ನೇಮಕ

ಲಭ್ಯವಿರುವ ಮಾಹಿತಿಯ ಪ್ರಕಾರ, ಡಾ. ಅಂಕಿತಾ ಯರಗಲ್ ಅವರನ್ನು 2025ರಲ್ಲಿ ಹಿಂದಿನ ಡಿಎಚ್‌ಒ ಡಾ. ಮಂಜುನಾಥ ಅವರ ಅವಧಿಯಲ್ಲಿ ‘ನಮ್ಮ ಕ್ಲಿನಿಕ್’ ವೈದ್ಯಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಸುಮಾರು ₹75 ಸಾವಿರ ವೇತನ ಶ್ರೇಣಿಯಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದ ಅವರು, ಬಳಿಕ 2026ರ ಮಾರ್ಚ್‌ನಲ್ಲಿ ಎಸ್‌.ಎನ್‌. ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪ್ಯಾಥಾಲಜಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ ಎಂದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಸರ್ಕಾರಿ ವೈದ್ಯಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಎಂಡಿ ವ್ಯಾಸಂಗ ನಡೆಸಿರುವುದು ನಿಯಮಾನುಸಾರವೇ ಎಂಬ ಪ್ರಶ್ನೆ ಇದೀಗ ವಿಚಾರಣೆಯ ಪ್ರಮುಖ ಅಂಶವಾಗಿದೆ. ಈ ಅವಧಿಯಲ್ಲಿ ವೈದ್ಯೆ ಕರ್ತವ್ಯಕ್ಕೆ ಗೈರಾಗಿರುವ ಕುರಿತು ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕರ್ತವ್ಯ ಲೋಪದ ಆರೋಪ

ಅಧಿಕಾರಿಗಳ ಪ್ರಕಾರ, ಡಾ. ಅಂಕಿತಾ ಅವರು ‘ನಮ್ಮ ಕ್ಲಿನಿಕ್’ ಕರ್ತವ್ಯದಿಂದ ಗೈರಾಗಿದ್ದರಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಪಡೆಯುವಲ್ಲಿ ತೊಂದರೆ ಉಂಟಾಗಿದೆ ಎಂಬ ಆರೋಪವಿದೆ. ಈ ಹಿನ್ನೆಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ ಅವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಎಸ್‌.ಎನ್‌. ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿದ್ದರೂ, ನಿಗದಿತ ದಿನದಂದು ಸಿಇಒ ಅವರ ವಿಚಾರಣೆಗೆ ಡಾ. ಅಂಕಿತಾ ಹಾಜರಾಗಿಲ್ಲ. ಹೀಗಾಗಿ ಅಧಿಕಾರಿಗಳು ಮತ್ತೊಮ್ಮೆ ಖಡಕ್ ನೋಟಿಸ್ ಜಾರಿ ಮಾಡಿದ್ದಾರೆ.

ಸೆ.18ಕ್ಕೆ ಮತ್ತೆ ವಿಚಾರಣೆ

ಕರ್ತವ್ಯ ಲೋಪ ಮತ್ತು ವೃತ್ತಿಪರ ದುರ್ನಡತೆಯ ಆರೋಪಗಳು ಸಾಬೀತಾದಲ್ಲಿ ಕರ್ನಾಟಕ ವೈದ್ಯಕೀಯ ಮಂಡಳಿ (KMC) ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ಕ್ಕೆ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಅಲ್ಲದೆ, ಸರ್ಕಾರಿ ಸೇವೆ ಮತ್ತು ಪಿಜಿ ವ್ಯಾಸಂಗವನ್ನು ಏಕಕಾಲದಲ್ಲಿ ನಡೆಸಿರುವ ಅವಧಿಯಲ್ಲಿ ಪಡೆದ ವೇತನ ಹಾಗೂ ಗೌರವಧನದ ಕುರಿತು ಕೂಡ ನಿಯಮಾನುಸಾರ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 18ರಂದು ಬೆಳಗ್ಗೆ 10 ಗಂಟೆಗೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಕೊಠಡಿ ಸಂಖ್ಯೆ 11ರಲ್ಲಿ ನಿಗದಿಪಡಿಸಲಾಗಿದೆ. ಅಂದು ಅಗತ್ಯ ದಾಖಲೆಗಳೊಂದಿಗೆ ಖುದ್ದು ಹಾಜರಾಗುವಂತೆ ಡಾ. ಅಂಕಿತಾ ಅವರಿಗೆ ಸೂಚಿಸಲಾಗಿದೆ.

ನಿಗದಿತ ವಿಚಾರಣೆಗೆ ಹಾಜರಾಗದಿದ್ದರೆ ಲಭ್ಯ ದಾಖಲೆಗಳ ಆಧಾರದ ಮೇಲೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಇಒ ನೋಟಿಸ್‌ನಲ್ಲಿ ಎಚ್ಚರಿಸಿದ್ದಾರೆ.

ಈ ಮಧ್ಯೆ, ಡಾ. ಅಂಕಿತಾ ಅವರನ್ನು ‘ನಮ್ಮ ಕ್ಲಿನಿಕ್’ ವೈದ್ಯಾಧಿಕಾರಿ ಸೇವೆಯಿಂದ ಬಿಡುಗಡೆಗೊಳಿಸುವಂತೆ ಡಿಎಚ್‌ಒ ಡಾ. ರಾಜಕುಮಾರ ಯರಗಲ್ ಆದೇಶಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣದ ಕುರಿತು ನಡೆಯುತ್ತಿರುವ ವಿಚಾರಣೆಯ ಬಳಿಕ ಮುಂದಿನ ಕ್ರಮದ ಬಗ್ಗೆ ಸ್ಪಷ್ಟತೆ ಸಿಗಲಿದೆ.

Exit mobile version