ಪ್ರಧಾನಿ ಮೋದಿ ಚುರುಮುರಿ ತಿಂದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಡಾನ್ಸ್‌ ವಿಡಿಯೋ ವೈರಲ್

Untitled design 2026 04 22T161704.339

ಪಶ್ಚಿಮ ಬಂಗಾಳ, ಏಪ್ರಿಲ್ 22: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ರಂಗೇರಿದೆ. ನಾಳೆ (ಏಪ್ರಿಲ್ 23) ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ದಿಗ್ಗಜರು ರಾಜ್ಯದಲ್ಲಿ ರಾಜಕೀಯ ಬ್ಯುಸಿಯಾಗಿದ್ದಾರೆ. ಈ ನಡುವೆ, ಮೋದಿಯವರ ‘ಚುರುಮುರಿ ಪ್ರಸಂಗ’ ಮತ್ತು ಮಮತಾ ಬ್ಯಾನರ್ಜಿ ಅವರ ‘ನೃತ್ಯ ವಿಡಿಯೋ’ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಪ್ರಧಾನಿ ಮೋದಿ ಚುರುಮುರಿ ಸವಿದಿದ್ದು ಹೇಗೆ?
ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಸಣ್ಣ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದರು. ಕೇವಲ 10 ರೂಪಾಯಿ ಮೌಲ್ಯದ ಜಲ್ಮುರಿ (ಚುರುಮುರಿ) ಖರೀದಿ ಮಾಡಿ, ಅದನ್ನು ಸವಿದರು ಮತ್ತು ಸ್ಥಳೀಯರಿಗೆ ಹಂಚಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ‘ನಾಟಕ’, ‘ಪ್ರಚಾರದ ತಂತ್ರ’ ಎಂದು ವಿರೋಧಿಗಳು ಟೀಕಿಸಿದ್ದಾರೆ. ಸಾಮಾನ್ಯವಾಗಿ ಪ್ರಧಾನಿಯಂತಹ ಪ್ರಮುಖ ನಾಯಕರು ಯಾವುದೇ ಆಹಾರ ಸೇವಿಸುವ ಮೊದಲು ಸುರಕ್ಷತಾ ಪ್ರೊಟೋಕಾಲ್ ಅಡಿಯಲ್ಲಿ ಅದನ್ನು ಪರೀಕ್ಷಿಸಲಾಗುತ್ತದೆ. ಹಾಗಾಗಿ ಇದು ‘ಆಕಸ್ಮಿಕ’ವಲ್ಲ, ಬದಲಿಗೆ ‘ನಿರ್ದೇಶಿತ’ ಕಾರ್ಯಕ್ರಮ ಎನ್ನುವ ಟೀಕೆ ಕೇಳಿಬಂದಿದೆ. ಈ ಟೀಕೆಗೆ ಮಮತಾ ಬ್ಯಾನರ್ಜಿ ಸೇರಿಕೊಂಡಿದ್ದಾರೆ.

ದೀದಿ ಕೆಂಡಾಮಂಡಲ
ಮೋದಿಯವರ ಚುರುಮುರಿ ಪ್ರಸಂಗವನ್ನು ತೀವ್ರವಾಗಿ ಖಂಡಿಸಿರುವ ಮಮತಾ ಬ್ಯಾನರ್ಜಿ, “ಇದೆಲ್ಲಾ ಸಂಪೂರ್ಣ ನಾಟಕ. ಸಾಮಾನ್ಯ ಜನರನ್ನು ಮರುಳು ಮಾಡುವ ಪವಾಡ ಪ್ರದರ್ಶನ. ಪ್ರಧಾನಿಯವರಿಗೆ ಪ್ರೊಟೋಕಾಲ್ ಇರುತ್ತದೆ, ಅವರು ಕಂಡಕಂಡಲ್ಲಿ ತಿನ್ನುವುದಿಲ್ಲ. ಹೀಗೆ ಅಭಿನಯಿಸಿ ಮತಗಳನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆದಿದೆ” ಎಂದು ಅಬ್ಬರದ ಭಾಷಣ ಮಾಡಿದ್ದಾರೆ. ಆದರೆ ಈ ಟೀಕೆಯ ನಡುವೆಯೇ, ದೀದಿ ಮತ್ತೊಂದು ಕಾರ್ಯಕ್ರಮದಲ್ಲಿ ಸೊಂಟ ಬಳುಕಿಸಿ ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ.

ಕೂಚ್ ಬೆಹರ್‌ನಲ್ಲಿ ಭರ್ಜರಿ ನೃತ್ಯ
ಪಶ್ಚಿಮ ಬಂಗಾಳದ ಕೂಚ್ ಬೆಹರ್‌ನಲ್ಲಿ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಾಳಕ್ಕೆ ತಕ್ಕಂತೆ ಅಬ್ಬರದ ನೃತ್ಯ ಮಾಡಿದರು. ಸ್ಥಳೀಯ ಸಂಗೀತಕ್ಕೆ ಸೊಂಟ ಬಳುಕಿಸಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅವರ ಬೆಂಬಲಿಗರು ಇದನ್ನು ‘ಸಂಸ್ಕೃತಿಯ ಗೌರವ’, ‘ನಿಜವಾದ ಸೊಬಗು’ ಎಂದು ಪ್ರಶಂಸಿಸಿದರೆ, ವಿರೋಧಿಗಳು “ಮೋದಿ ನಾಟಕ ಮಾಡಿದರೆ ನೀವು ನೃತ್ಯ ಮಾಡಿದ್ದು ಸತ್ಯವೇ? ಎರಡೂ ಪ್ರಚಾರದ ಭಾಗವೇ?” ಎಂದು ಪ್ರಶ್ನಿಸಿದ್ದಾರೆ.

ಮಮತಾ ಅವರ ಅಭಿಮಾನಿಗಳು “ದೀದಿ ಯಾವಾಗಲೂ ಸಾಮಾನ್ಯ ಜನರಂತೆ ನಡೆದುಕೊಳ್ಳುತ್ತಾರೆ, ಅವರ ನೃತ್ಯ ಅಧಿಕ ಪ್ರೊಟೋಕಾಲ್ ಅಲ್ಲ, ಅದು ಸಂಸ್ಕೃತಿಯ ಸಂಭ್ರಮ” ಎಂದು ವಾದಿಸುತ್ತಾರೆ.

Exit mobile version