ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿಯ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದ್ದು, ಇಂಡಿ ಸೇರಿದಂತೆ 29 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಹೊಸದಾಗಿ ಸೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ಮಳೆಯ ಕೊರತೆ, ಬೆಳೆ ಪರಿಸ್ಥಿತಿ ಹಾಗೂ ವಿವಿಧ ಮಾನದಂಡಗಳ ಆಧಾರದ ಮೇಲೆ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಮುಂದುವರಿದಿದೆ. ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಬಳಿಕ ಎರಡನೇ ಹಂತದಲ್ಲಿ 23 ತಾಲೂಕುಗಳು, ಮೂರನೇ ಹಂತದಲ್ಲಿ 53 ತಾಲೂಕುಗಳು ಹಾಗೂ ನಾಲ್ಕನೇ ಹಂತದಲ್ಲಿ 11 ತಾಲೂಕುಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು. ಇದೀಗ ಮತ್ತೊಂದು ಹಂತದಲ್ಲಿ 29 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ.
ಹೊಸದಾಗಿ ಸೇರ್ಪಡೆಯಾದ ತಾಲೂಕುಗಳಿಗೆ ಸಂಬಂಧಿಸಿದಂತೆ ಸರ್ಕಾರ ‘ಗ್ರೌಂಡ್ ಟ್ರೂಥಿಂಗ್’ ಅಧಿಸೂಚನೆ ಹೊರಡಿಸಿದೆ. ಸ್ಥಳೀಯ ಮಟ್ಟದಲ್ಲಿ ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ತಾಲೂಕುಗಳನ್ನು ಪ್ರಕ್ರಿಯೆಗೆ ಒಳಪಡಿಸಲಾಗಿದೆ.
ಇಂಡಿ, ಚಡಚಣವೂ ಬರ ಪಟ್ಟಿಗೆ
ಹೊಸದಾಗಿ ಸೇರ್ಪಡೆಯಾದ ತಾಲೂಕುಗಳ ಪೈಕಿ ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ಪ್ರಮುಖವಾಗಿವೆ. ಇಂಡಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವ ವಿಚಾರ ಇತ್ತೀಚೆಗೆ ರಾಜಕೀಯವಾಗಿ ಗಮನ ಸೆಳೆದಿತ್ತು. ಇಂಡಿ ಕ್ಷೇತ್ರವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಬುಧವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶಾಸಕರ ರಾಜೀನಾಮೆ ನೀಡಿದ ಒಂದು ದಿನದ ಬಳಿಕವೇ ಇಂಡಿ ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗಿರುವುದು ಗಮನ ಸೆಳೆದಿದೆ.
ಯಾವ ತಾಲೂಕುಗಳು ಸೇರ್ಪಡೆ?
ಸರ್ಕಾರದ ಹೊಸ ಪಟ್ಟಿಯಲ್ಲಿ ಬೀದರ್ ಜಿಲ್ಲೆಯ ಔರಾದ್, ಬೆಳಗಾವಿ ಜಿಲ್ಲೆಯ ಗೋಕಾಕ್, ರಾಮದುರ್ಗ, ಸವದತ್ತಿ ಮತ್ತು ಕಾಗವಾಡ, ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ, ಧಾರವಾಡ ಜಿಲ್ಲೆಯ ಕಲಘಟಗಿ, ಕುಂದಗೋಳ ಮತ್ತು ಅಳ್ನಾವರ ತಾಲೂಕುಗಳು ಸೇರಿವೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ, ಸೊರಬ ಹಾಗೂ ತೀರ್ಥಹಳ್ಳಿ ತಾಲೂಕುಗಳು ಕೂಡ ಪಟ್ಟಿಗೆ ಸೇರ್ಪಡೆಯಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಮತ್ತು ಕಳಸ, ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ಕುಶಾಲನಗರ ತಾಲೂಕುಗಳಿಗೂ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ ಮತ್ತು ಉಳ್ಳಾಳ, ಉಡುಪಿ ಜಿಲ್ಲೆಯ ಉಡುಪಿ ಮತ್ತು ಬೈಂದೂರು ತಾಲೂಕುಗಳು ಹೊಸ ಪಟ್ಟಿಯಲ್ಲಿವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಭಟ್ಕಳ, ಹಳಿಯಾಳ ಮತ್ತು ಶಿರಸಿ ತಾಲೂಕುಗಳನ್ನೂ ಸೇರಿಸಲಾಗಿದೆ.
ರಾಜ್ಯದಲ್ಲಿ 177 ಬರಪೀಡಿತ ತಾಲೂಕುಗಳು
ಹೊಸದಾಗಿ 29 ತಾಲೂಕುಗಳ ಸೇರ್ಪಡೆಯೊಂದಿಗೆ ಕರ್ನಾಟಕದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾದ ಪ್ರದೇಶಗಳಲ್ಲಿ ಮಳೆ ಕೊರತೆ, ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ ಹಾಗೂ ನೀರಿನ ಲಭ್ಯತೆ ಸೇರಿದಂತೆ ವಿವಿಧ ಅಂಶಗಳನ್ನು ಸರ್ಕಾರ ಪರಿಗಣಿಸುತ್ತಿದೆ.
