ಬೆಂಗಳೂರು: ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಯುವ ಪಡೆ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ U19 ತಂಡವನ್ನು 103 ರನ್‌ಗಳಿಂದ ಮಣಿಸಿದ ಭಾರತ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಭಾರತ ತಂಡದ ಗೆಲುವಿನಲ್ಲಿ ಯಶ್‌ವರ್ಧನ್ ಚೌಹಾಣ್ ಅವರ ಶತಕ ಹಾಗೂ ವಿಕೆ ವಿನೀತ್ ಅವರ ಆಕರ್ಷಕ ಅರ್ಧಶತಕ ಪ್ರಮುಖ ಪಾತ್ರವಹಿಸಿತು.
ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಲಕ್ಷಯ್ ರಾಯ್‌ಚಂದಾನಿ ಕೇವಲ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರಿಂದ ಭಾರತ 46 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು.
ಆ ಬಳಿಕ ಆರ್ಯವೀರ್ ಸೆಹ್ವಾಗ್ ಹಾಗೂ ವಿಕೆ ವಿನೀತ್ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡದ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿದರು. ಆರ್ಯವೀರ್ ಸೆಹ್ವಾಗ್ 48 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 47 ರನ್ ಗಳಿಸಿದರು. ಮತ್ತೊಂದೆಡೆ ವಿನೀತ್ ಉತ್ತಮ ಲಯದಲ್ಲಿ ಬ್ಯಾಟ್ ಬೀಸಿದರು.
ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅನ್ವಯ್ ದ್ರಾವಿಡ್ ಅವರಿಂದಲೂ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ಅವರು 8 ಎಸೆತಗಳಲ್ಲಿ 9 ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಭಾರತ ಮತ್ತೊಮ್ಮೆ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಕಂಡುಬಂದಿತ್ತು.
ಆದರೆ ಯಶ್‌ವರ್ಧನ್ ಚೌಹಾಣ್ ಅದ್ಭುತ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಸತತ ಎರಡನೇ ಪಂದ್ಯದಲ್ಲೂ ಉತ್ತಮ ಫಾರ್ಮ್ ಮುಂದುವರಿಸಿದ ಯಶ್‌ವರ್ಧನ್, ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 100 ಎಸೆತಗಳನ್ನು ಎದುರಿಸಿದ ಅವರು 15 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 122 ರನ್‌ಗಳ ಭರ್ಜರಿ ಶತಕ ಸಿಡಿಸಿದರು.
ಇನ್ನೊಂದೆಡೆ ವಿಕೆ ವಿನೀತ್ ಕೂಡ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದರು. 92 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 87 ರನ್‌ಗಳ ಅಮೋಘ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 341 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
341 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ U19 ತಂಡಕ್ಕೆ ಆರಂಭದಲ್ಲೇ ಹಿನ್ನಡೆ ಎದುರಾಯಿತು. ಕೇವಲ 29 ರನ್‌ಗಳಾಗುವಷ್ಟರಲ್ಲಿ ಆಸೀಸ್ ತಂಡ ತನ್ನ ಮೊದಲ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಮ್ಯಾಥ್ಯೂ ಲಾಫ್ ಹಾಗೂ ನಾಯಕ ಜ್ಯಾಕ್ ಸ್ಜೋಸ್ನೆಕ್ ತಂಡದ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು.
ಮ್ಯಾಥ್ಯೂ ಲಾಫ್ 42 ರನ್ ಗಳಿಸಿ ಔಟಾದರೆ, ನಾಯಕ ಜ್ಯಾಕ್ ಸ್ಜೋಸ್ನೆಕ್ 81 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡಿದರು. ಬಳಿಕ ಬ್ಲೇಕ್ ಕ್ಯಾಟಲ್ 44 ರನ್ ಹಾಗೂ ಝೆಡ್ ಹೊಲಿಕ್ 33 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 41.1 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಭಾರತ 103 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
