ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್; ಪತಿಯ ಆಧಾರ್ ಕಾರ್ಡ್ ಕಡ್ಡಾಯ

ಅಲರ್ಟ್ (10)

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳು ಸಿದ್ಧವಾಗಿದ್ದು, ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಮುಂದಾಗಿದೆ. ಯೋಜನೆಯ ಪ್ರಯೋಜನ ನೈಜ ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವು ಪರಿಶೀಲನಾ ಕ್ರಮಗಳನ್ನು ರೂಪಿಸಿದೆ ಎಂದು ತಿಳಿದುಬಂದಿದೆ.

ಹೊಸ ಮಾರ್ಗಸೂಚಿಯ ಪ್ರಮುಖ ಅಂಶವೆಂದರೆ, ಇನ್ನು ಮುಂದೆ ಮನೆಯ ಯಜಮಾನಿಯ ಆಧಾರ್ ಸಂಖ್ಯೆಯ ಜತೆಗೆ ಆಕೆಯ ಪತಿಯ ಆಧಾರ್ ಸಂಖ್ಯೆಯನ್ನೂ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ ಎನ್ನಲಾಗಿದೆ. ಈ ಮೂಲಕ ಫಲಾನುಭವಿಯ ಕುಟುಂಬದ ವಿವರಗಳನ್ನು ಮತ್ತಷ್ಟು ನಿಖರವಾಗಿ ಪರಿಶೀಲಿಸುವ ಉದ್ದೇಶ ಹೊಂದಲಾಗಿದೆ.

ಪತಿ ಆಧಾರ್ ಲಿಂಕ್ ಕಡ್ಡಾಯ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯ ಆಧಾರ್ ಮಾತ್ರವಲ್ಲದೆ, ಪತಿಯ ಆಧಾರ್ ವಿವರಗಳನ್ನೂ ಪರಿಶೀಲಿಸಲಾಗುತ್ತದೆ. ಕುಟುಂಬದ ಗುರುತು ಮತ್ತು ಅರ್ಹತೆಯನ್ನು ದೃಢಪಡಿಸುವ ಪ್ರಕ್ರಿಯೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಇದರ ಜತೆಗೆ ಫಲಾನುಭವಿಗಳು ನೀಡುವ ಬ್ಯಾಂಕ್ ಖಾತೆಯಲ್ಲಿಯೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಯೋಜನೆಯ ಹಣ ಜಮೆಯಾಗುವ ಖಾತೆಯಲ್ಲಿ ಸಾಲ ಅಥವಾ ಸಂಬಂಧಿತ ಅಡೆತಡೆ ಇರಬಾರದು ಎಂದು ಹೊಸ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಫಲಾನುಭವಿಯ ಹೆಸರು ಮತ್ತು ವಿಳಾಸ ಕೂಡ ಆಧಾರ್ ಕಾರ್ಡ್‌ನಲ್ಲಿರುವ ವಿವರಗಳಿಗೆ ಹೊಂದಾಣಿಕೆಯಾಗಬೇಕು.

ದಾಖಲೆಗಳ ಪರಿಶೀಲನೆ

ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ಗಳಲ್ಲಿರುವ ಮಾಹಿತಿಯನ್ನು ಪರಿಶೀಲಿಸುವುದಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಹೆಸರು, ವಿಳಾಸ ಸೇರಿದಂತೆ ಪ್ರಮುಖ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ ಫಲಾನುಭವಿಯ ಅರ್ಹತೆಯನ್ನು ಮರುಪರಿಶೀಲಿಸುವ ಸಾಧ್ಯತೆ ಇದೆ.

ಇದರ ಜತೆಗೆ ಬಯೋಮೆಟ್ರಿಕ್ ಅಥವಾ ಫೇಶಿಯಲ್ ಆಥೆಂಟಿಕೇಷನ್ ಮೂಲಕ ಫಲಾನುಭವಿಯ ಗುರುತನ್ನು ದೃಢಪಡಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಒಂದೇ ವ್ಯಕ್ತಿಯ ಹೆಸರಿನಲ್ಲಿ ಅನರ್ಹವಾಗಿ ಯೋಜನೆಯ ಪ್ರಯೋಜನ ಪಡೆಯುವುದನ್ನು ತಡೆಯುವ ಉದ್ದೇಶ ಹೊಂದಲಾಗಿದೆ.

17 ಪ್ರಶ್ನೆಗಳ ಹೊಸ ಅರ್ಜಿ

ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಪ್ರಕ್ರಿಯೆಗಾಗಿ ವಿಶೇಷವಾಗಿ ಗಣತಿದಾರರನ್ನು ನಿಯೋಜಿಸುವ ಪ್ರಸ್ತಾವವಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ.

ಈ ಪರಿಶೀಲನೆಗಾಗಿ 17 ಪ್ರಶ್ನೆಗಳನ್ನು ಒಳಗೊಂಡ ಹೊಸ ಅರ್ಜಿ ಸಿದ್ಧಪಡಿಸಲಾಗಿದೆ. ಮನೆಗೆ ಭೇಟಿ ನೀಡುವ ಗಣತಿದಾರರು ಫಲಾನುಭವಿಗಳ ಕುಟುಂಬದ ವಿವರ, ಪಡಿತರ ಚೀಟಿ, ಆಧಾರ್ ಹಾಗೂ ಬ್ಯಾಂಕ್ ಖಾತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಅಗತ್ಯವಿದ್ದಲ್ಲಿ ಬಯೋಮೆಟ್ರಿಕ್ ಅಥವಾ ಮುಖ ಗುರುತಿಸುವಿಕೆಯ ಮೂಲಕವೂ ದೃಢೀಕರಣ ನಡೆಸಲಾಗುತ್ತದೆ.

ಎಸ್‌ಐಆರ್ ಬಳಿಕ ಮರುಪರಿಶೀಲನೆ

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಗೆ ಚಾಲನೆ ನೀಡುವ ಉದ್ದೇಶ ಸರ್ಕಾರಕ್ಕಿದೆ ಎನ್ನಲಾಗಿದೆ. ರಾಜ್ಯದ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಪ್ರಯೋಜನ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಮುಖ್ಯಮಂತ್ರಿಗಳ ಅಂತಿಮ ಅನುಮೋದನೆ ದೊರೆತ ಬಳಿಕ ಸ್ಥಳೀಯ ಮಟ್ಟದಲ್ಲಿ ಪರಿಶೀಲನಾ ಕಾರ್ಯಾಚರಣೆ ಚುರುಕುಗೊಳ್ಳುವ ನಿರೀಕ್ಷೆಯಿದೆ. ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಅರ್ಹತೆ ಹೊಂದಿರುವವರಿಗೆ ಯೋಜನೆಯ ಹಣ ಮುಂದುವರಿಯಲಿದೆ.

 

Exit mobile version