ಮಡಿಕೇರಿ: ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದೆ. ಹಬ್ಬದ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ಆಯೋಜಕರಿಗೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ವಿಶೇಷವಾಗಿ ಗಣೇಶ ಮೂರ್ತಿ ಮೆರವಣಿಗೆಯ ನಿಗದಿತ ಮಾರ್ಗ, ದಿನಾಂಕ ಹಾಗೂ ಸಮಯದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಅನುಮತಿ ಪಡೆದಿರುವ ರೂಟ್ ಅಥವಾ ಸಮಯವನ್ನು ಬದಲಾಯಿಸಿ ಮೆರವಣಿಗೆ ನಡೆಸಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕ್ರೌಡ್ ಮ್ಯಾನೇಜ್ಮೆಂಟ್ಗೆ ವಿಶೇಷ ಒತ್ತು
ಗಣೇಶ ಮೆರವಣಿಗೆ ವೇಳೆ ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇರುವುದರಿಂದ ಜನದಟ್ಟಣೆ ನಿಯಂತ್ರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಮೆರವಣಿಗೆ ಆಯೋಜಕರು ಕಡ್ಡಾಯವಾಗಿ ಕ್ರೌಡ್ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿದ ಎಸ್ಒಪಿಯನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಆಯೋಜಕರಿಂದ ಅಂಡರ್ಟೇಕಿಂಗ್ ಪಡೆದು, ಜನಸಂದಣಿ ನಿಯಂತ್ರಣ, ಮೆರವಣಿಗೆಯ ಸುರಕ್ಷತೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಗೊಂದಲ ಅಥವಾ ಅಹಿತಕರ ಘಟನೆ ನಡೆಯದಂತೆ ಆಯೋಜಕರು ಮತ್ತು ಪೊಲೀಸರು ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ವಿದ್ಯುತ್ ತಂತಿಗಳ ಬಗ್ಗೆ ಎಚ್ಚರಿಕೆ
ಗಣೇಶ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ವಿದ್ಯುತ್ ತಂತಿಗಳು, ಕಂಬಗಳು ಹಾಗೂ ಇತರ ವಿದ್ಯುತ್ ಸಂಪರ್ಕಗಳ ಬಗ್ಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕಡಿಮೆ ಎತ್ತರದಲ್ಲಿರುವ ವಿದ್ಯುತ್ ತಂತಿಗಳಿಗೆ ಗಣೇಶ ಮೂರ್ತಿ, ಮೆರವಣಿಗೆ ವಾಹನ ಅಥವಾ ಅಲಂಕಾರಗಳು ತಾಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರ್ತಿ ಅಥವಾ ವಾಹನ ವಿದ್ಯುತ್ ತಂತಿಗೆ ತಾಗಿದರೆ ಶಾರ್ಟ್ ಸರ್ಕ್ಯೂಟ್ ಮಾತ್ರವಲ್ಲದೆ, ಗಂಭೀರ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಈ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ. ಪಿಡಬ್ಲ್ಯುಡಿ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಿಂಗಲ್ ವಿಂಡೋ ವ್ಯವಸ್ಥೆಯಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಡಿಜೆ, ಲೌಡ್ಸ್ಪೀಕರ್ಗೆ ಡೆಸಿಬೆಲ್ ಮಿತಿ
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಡಿಜೆ ಹಾಗೂ ಸೌಂಡ್ ಸಿಸ್ಟಂ ಪ್ರಮುಖ ಆಕರ್ಷಣೆಯಾಗಿರುತ್ತದೆ. ಆದರೆ ಈ ಬಾರಿ ಅತಿಯಾದ ಶಬ್ದಕ್ಕೆ ಕೊಡಗು ಪೊಲೀಸರು ಬ್ರೇಕ್ ಹಾಕಿದ್ದಾರೆ. ಧ್ವನಿವರ್ಧಕಗಳನ್ನು ನಿಗದಿತ ಡೆಸಿಬೆಲ್ ಮಿತಿಯೊಳಗೆ ಮಾತ್ರ ಬಳಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ನಿಗದಿತ ನಿಯಮಗಳ ಪ್ರಕಾರ ವಸತಿ ಪ್ರದೇಶಗಳಲ್ಲಿ 55 ಡೆಸಿಬೆಲ್, ವಾಣಿಜ್ಯ ಪ್ರದೇಶಗಳಲ್ಲಿ 65 ಡೆಸಿಬೆಲ್, ಕೈಗಾರಿಕಾ ಪ್ರದೇಶಗಳಲ್ಲಿ 75 ಡೆಸಿಬೆಲ್ ಹಾಗೂ ಸೈಲೆಂಟ್ ಝೋನ್ಗಳಲ್ಲಿ 50 ಡೆಸಿಬೆಲ್ ಮಿತಿ ನಿಗದಿಯಾಗಿದೆ.
ಇದರ ಜೊತೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ನಿರ್ಬಂಧವಿದೆ. ಹೀಗಾಗಿ ಗಣೇಶ ಹಬ್ಬದ ಆಯೋಜಕರು ಮತ್ತು ಸೌಂಡ್ ಸಿಸ್ಟಂ ಪೂರೈಕೆದಾರರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ.
ಪ್ರೆಷರ್ ಹಾರ್ನ್, ಪ್ರೆಷರ್ ಮೆಡ್ಗೆ ನೋ ಎಂಟ್ರಿ
ಅತಿಯಾದ ಶಬ್ದ ಉಂಟುಮಾಡುವ ಪ್ರೆಷರ್ ಹಾರ್ನ್, ಪ್ರೆಷರ್ ಮೆಡ್ ಹಾಗೂ ಇತರ ಸಾಧನಗಳ ಬಳಕೆಯನ್ನೂ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸೌಂಡ್ ಮತ್ತು ಲೈಟ್ಸ್ ವ್ಯವಸ್ಥೆ ಮಾಡುವ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ಹೆಚ್ಚಿನ ಶಬ್ದ ಉಂಟುಮಾಡುವ ಸಾಧನಗಳನ್ನು ಬಳಸಬಾರದು ಎಂದು ಸೂಚಿಸಲಾಗಿದೆ.
