ಗಾಯಕನ ಮೇಲೆ ಮಳೆಯಂತೆ ಕೋಟಿ ಕೋಟಿ ಹಣ ಸುರಿಸಿದ ಭಕ್ತರು..! ವಿಡಿಯೋ ವೈರಲ್

Untitled design 2026 05 15T204228.451

ಜುನಾಗಢ್, ಮೇ 15: ಗುಜರಾತ್‌‌ನ ಮಾಲಿಯಾ ಹಟಿನಾದಲ್ಲಿ ನಡೆದ ಭಕ್ತಿ ಸಂಗೀತ ಕಾರ್ಯಕ್ರಮವೊಂದು ಅಕ್ಷರಶಃ ಹಣದ ಮಹಾವೃಷ್ಟಿಗೆ ಸಾಕ್ಷಿಯಾಗಿದೆ. ಪ್ರಸಿದ್ಧ ಭಜನಾ ಗಾಯಕ ಕವಿರಾಜ್ ಜಿಗ್ಣೇಶ್ ಅವರು ವೇದಿಕೆಯ ಮೇಲೆ ಭಗವದ್ ಜ್ಞಾನ ಯಾಗದ ಅಂಗವಾಗಿ ಹಾಡುತ್ತಿದ್ದಾಗ, ಭಕ್ತರು ಅವರ ಮೇಲೆ ನೋಟುಗಳ ಮಳೆಯನ್ನೇ ಸುರಿದಿದ್ದಾರೆ. ಈ ಅಪರೂಪದ ದೃಶ್ಯ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದು, ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

ಭಗವದ್ ಜ್ಞಾನ ಯಾಗ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಈ ಧಾರ್ಮಿಕ ಸಮಾರಂಭಕ್ಕೆ ನೂರಾರು ಭಕ್ತರು ಆಗಮಿಸಿದ್ದರು. ವೇದಿಕೆಯ ಮೇಲೆ ಕುಳಿತು ಕವಿರಾಜ್ ಜಿಗ್ಣೇಶ್ ಅವರು ಭಜನೆಗಳನ್ನು ಹಾಡುತ್ತಿದ್ದ ವೇಳೆ, ಪ್ರೇಕ್ಷಕರಲ್ಲಿ ಕೆಲವರು ಆರಂಭದಲ್ಲಿ 10, 20, 50 ಹಾಗೂ 500 ರೂಪಾಯಿ ನೋಟುಗಳನ್ನು ವೇದಿಕೆಯತ್ತ ಎಸೆಯಲು ಪ್ರಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಹಣದ ಮಳೆಯಾಗಿ ಮಾರ್ಪಟ್ಟಿತು.

ಕಾರ್ಯಕ್ರಮ ಮುಂದುವರಿದಂತೆ ಹಲವಾರು ಭಕ್ತರು ಹಣ ತುಂಬಿದ ಚೀಲಗಳನ್ನೇ ಹೊತ್ತುಕೊಂಡು ವೇದಿಕೆಯತ್ತ ಬಂದರು. ಕೆಲವರು ನೋಟುಗಳ ಕಂತೆಗಳನ್ನು ಗಾಯಕನ ಸುತ್ತ ಸುರಿಸುತ್ತಿದ್ದರೆ, ಇನ್ನೂ ಕೆಲವರು ನೇರವಾಗಿ ವೇದಿಕೆ ಮೇಲೆಯೇ ಹಣವನ್ನು ಹಾಕುತ್ತಿದ್ದರು. ಸ್ವಲ್ಪ ಸಮಯದಲ್ಲೇ ಗಾಯಕ ಕುಳಿತಿದ್ದ ಸ್ಥಳದ ಸುತ್ತ ನೋಟುಗಳ ದೊಡ್ಡ ರಾಶಿ ನಿರ್ಮಾಣವಾಯಿತು. ವಿಡಿಯೋದಲ್ಲಿ ಕವಿರಾಜ್ ಜಿಗ್ಣೇಶ್ ಅವರು ನೋಟುಗಳ ರಾಶಿಯ ಮಧ್ಯೆಯೇ ಕುಳಿತು ಭಜನೆ ಹಾಡುತ್ತಿರುವ ದೃಶ್ಯ ಸ್ಪಷ್ಟವಾಗಿ ಕಾಣುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಹಾಡಿನ ತಾಳಕ್ಕೆ ಚಪ್ಪಾಳೆ ತಟ್ಟುತ್ತಾ, ಕುಣಿದು ಕುಪ್ಪಳಿಸುತ್ತಾ ಭಕ್ತಿ ಭಾವದಲ್ಲಿ ತೇಲುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಹಣದ ರಾಶಿ ಹೆಚ್ಚಾಗುತ್ತಿದ್ದಂತೆ ಕಾರ್ಯಕ್ರಮದ ಸ್ವಯಂಸೇವಕರು ಅದನ್ನು ಸರಿಪಡಿಸಲು ಮತ್ತು ಸಂಗ್ರಹಿಸಲು ಹರಸಾಹಸ ಪಟ್ಟರು. ವೇದಿಕೆ ಮೇಲೆಯೇ ಹಣದ ಕಂತೆಗಳು ತುಂಬಿಕೊಂಡಿದ್ದರಿಂದ ಕೆಲಕಾಲ ಗಾಯಕ ಹಾಡುವುದಕ್ಕೂ ಅಡ್ಡಿಯಾಯಿತು ಎನ್ನಲಾಗಿದೆ.

ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾದವು. ಕೆಲವರು “ಭಕ್ತಿಯ ಶಕ್ತಿ ಇದು” ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೊಬ್ಬರು “ಇದು ಧರ್ಮದ ಹೆಸರಿನಲ್ಲಿ ಹಣದ ಪ್ರದರ್ಶನ” ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು “ಇಷ್ಟು ಹಣವನ್ನು ಬಡವರಿಗೆ ಸಹಾಯ ಮಾಡಲು ಬಳಸಬಹುದಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

Exit mobile version