ಪೆಟ್ರೋಲ್ ದರ ಏರಿಕೆ ಬಳಿಕ ಮತ್ತೆ ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ

Untitled design 2026 05 22T201234.944

ನವದೆಹಲಿ: ಯುದ್ಧ ಭೀತಿಯ ಪರಿಣಾಮ ಇದೀಗ ಭಾರತದ ಜನರ ದೈನಂದಿನ ಬದುಕಿನ ಮೇಲೂ ನೇರ ಪರಿಣಾಮ ಬೀರುತ್ತಿದೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಕೊರತೆ ತೀವ್ರಗೊಂಡಿದ್ದು, ಅದರ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆಯ ಮೇಲೂ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಇದೀಗ ಅಡುಗೆ ಎಣ್ಣೆ ಬೆಲೆ ಮತ್ತೆ ಏರಿಕೆಯಾಗಿದೆ..

ಕಳೆದ ಎರಡು ತಿಂಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಅಡುಗೆ ಎಣ್ಣೆಯ ದರ ಪ್ರತಿ ಲೀಟರ್‌ಗೆ ಸುಮಾರು ₹10 ರಿಂದ ₹15ರವರೆಗೆ ಏರಿಕೆಯಾಗಿದೆ. ಪಾಮ್ ಆಯಿಲ್, ಸನ್‌ಫ್ಲೋವರ್ ಆಯಿಲ್ ಮತ್ತು ಸೋಯಾಬಿನ್ ಎಣ್ಣೆ ಬೆಲೆಗಳಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಭಾರತವು ಅಡುಗೆ ಎಣ್ಣೆಯ ಅವಶ್ಯಕತೆಗೆ ಬಹುಪಾಲು ವಿದೇಶಿ ಆಮದುಗಳ ಮೇಲೆ ಅವಲಂಬಿತವಾಗಿರುವುದರಿಂದ ಜಾಗತಿಕ ಮಾರುಕಟ್ಟೆಯ ಸಣ್ಣ ಬದಲಾವಣೆಗಳೇ ದೇಶೀಯ ಬೆಲೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ.

ಮಾರುಕಟ್ಟೆ ತಜ್ಞರ ಪ್ರಕಾರ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೆಲವು ಕಡೆ ಈಗಾಗಲೇ ಉತ್ತಮ ಗುಣಮಟ್ಟದ ಅಡುಗೆ ಎಣ್ಣೆ ಪ್ರತಿ ಲೀಟರ್‌ಗೆ ₹180ರಿಂದ ₹190ರ ಮಟ್ಟ ತಲುಪಿದ್ದು, ಶೀಘ್ರದಲ್ಲೇ ₹200 ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ತೀವ್ರ ಹೊರೆ ತಂದಿದೆ. ಈಗಾಗಲೇ ತರಕಾರಿ, ಅಕ್ಕಿ, ಬೇಳೆ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಅಡುಗೆ ಎಣ್ಣೆ ದುಬಾರಿ ಮತ್ತಷ್ಟು ಕಷ್ಟ ಉಂಟುಮಾಡಿದೆ.

ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶೀಯ ತೈಲಬೀಜ ಉತ್ಪಾದನೆಗೆ ಉತ್ತೇಜನ ನೀಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ರೈತರಿಗೆ ಪ್ರೋತ್ಸಾಹಧನ, ಉತ್ತಮ ಬೀಜ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನ ಒದಗಿಸುವ ಮೂಲಕ ದೇಶೀಯ ಉತ್ಪಾದನೆ ಹೆಚ್ಚಿಸಿದರೆ ಮಾತ್ರ ಭವಿಷ್ಯದಲ್ಲಿ ಇಂತಹ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯ ಎನ್ನಲಾಗಿದೆ.

Exit mobile version