ಮಂಗಳೂರು: ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಗ್ ಬೂಸ್ಟ್ ನೀಡಿದೆ. ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಹೊರಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಸುಮಾರು 40 ವಿಷಯಗಳ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಕರಾವಳಿಯ ಜನರ ಹಲವು ದಶಕಗಳ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
₹32,611 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ
ಮಂಗಳೂರಿನ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಟ್ಟು ₹32,611 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದರಲ್ಲಿ ಸುಮಾರು ₹16,000 ಕೋಟಿಯನ್ನು ಗ್ರಾಮೀಣಾಭಿವೃದ್ಧಿಗೆ ಹಾಗೂ ಮತ್ತೊಂದು ₹16,000 ಕೋಟಿಯನ್ನು ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ತಿಳಿಸಲಾಗಿದೆ.
ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಅನುದಾನ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕರಾವಳಿಯ ಬಂದರು, ಮೀನುಗಾರಿಕೆ, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಮಂಗಳೂರು ಜಿಲ್ಲೆ ಆಗಲಿದೆಯೇ ದಕ್ಷಿಣ ಕನ್ನಡ?
ಸಚಿವ ಸಂಪುಟ ಸಭೆಯ ಮತ್ತೊಂದು ಪ್ರಮುಖ ವಿಚಾರ ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸಿದೆ. ಈ ಸಂಬಂಧ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಕರಡು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಾರ್ವಜನಿಕರ ಅಭಿಪ್ರಾಯವನ್ನು ಪಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ. ಹೀಗಾಗಿ ದಕ್ಷಿಣ ಕನ್ನಡದ ಹೆಸರು ಬದಲಾವಣೆಯ ವಿಚಾರವೂ ಇದೀಗ ಕುತೂಹಲ ಮೂಡಿಸಿದೆ.
ಕರಾವಳಿಗೆ ಹೊಸ ಟೂರಿಸಂ ನೀತಿ
ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸುವುದಾಗಿ ಸರ್ಕಾರ ಘೋಷಿಸಿದೆ. ಕರಾವಳಿಯ ಉದ್ದನೆಯ ಸಮುದ್ರತೀರ, ಬಂದರುಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ.
ಮೀನುಗಾರಿಕೆ, ಸಾಗರ ಅಧ್ಯಯನ ಮತ್ತು ಬ್ಲೂ ಎಕಾನಮಿ ಕ್ಷೇತ್ರಗಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಕರಾವಳಿ ಭಾಗದ ಯುವಕರಿಗೆ ಶಿಕ್ಷಣ, ಸಂಶೋಧನೆ ಹಾಗೂ ಉದ್ಯೋಗದ ಹೊಸ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ಯಾವ ಯೋಜನೆಗೆ ಎಷ್ಟು ಅನುದಾನ?
ಕರಾವಳಿ ಅಭಿವೃದ್ಧಿಯ ಭಾಗವಾಗಿ ಹಲವು ನಿರ್ದಿಷ್ಟ ಯೋಜನೆಗಳಿಗೂ ಅನುದಾನ ನಿಗದಿಪಡಿಸಲಾಗಿದೆ. ಲೈಟ್‌ಹೌಸ್ ಹಾಗೂ ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ₹60.34 ಕೋಟಿ, ಉತ್ತರ ಕನ್ನಡದ ಮಂಕಿ ಬಂದರು ಅಭಿವೃದ್ಧಿಗೆ ₹6,925 ಕೋಟಿ, ಉಡುಪಿಯ ಮಲ್ಪೆ ಪ್ರದೇಶದ PPP ಯೋಜನೆಗೆ ₹179 ಕೋಟಿ ಅನುದಾನ ನೀಡುವ ಪ್ರಸ್ತಾವನೆಗಳಿವೆ.
ಕಾರವಾರ ವಿಮಾನ ನಿಲ್ದಾಣದ ಅಭಿವೃದ್ಧಿಯ ಭಾಗವಾಗಿ ಭಾರತೀಯ ನೌಕಾಪಡೆಯಿಂದ ₹250 ಕೋಟಿ ವೆಚ್ಚದಲ್ಲಿ ರನ್‌ವೇ ನಿರ್ಮಾಣ ಮಾಡುವ ಯೋಜನೆಯೂ ಪ್ರಸ್ತಾಪದಲ್ಲಿದೆ.
ಇದರ ಜತೆಗೆ ಮಂಗಳೂರು-ಅತ್ರಾಡಿ ಮಾರ್ಗದ ಮರವೂರು ಸೇತುವೆ ಕಾಮಗಾರಿಗೆ ₹40 ಕೋಟಿ, ಕಟೀಲು ರಸ್ತೆ ಅಭಿವೃದ್ಧಿಗೆ ₹33 ಕೋಟಿ ಹಾಗೂ ಮುಲ್ಕಿಯ ದಾಮಸ್ ಕಟ್ಟೆ ಬಳಿಯ ಪಾಲಿಮಾರ್ ಕಟ್ಟೆ ಸೇತುವೆ ನಿರ್ಮಾಣಕ್ಕೆ ₹25 ಕೋಟಿ ಅನುದಾನ ನೀಡುವ ಯೋಜನೆಗಳೂ ಸೇರಿವೆ.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಮಂಗಳೂರಿನಲ್ಲಿ ಆರೋಗ್ಯ ಮೂಲಸೌಕರ್ಯ
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ₹425 ಕೋಟಿ ಅನುದಾನ ನೀಡುವ ಪ್ರಸ್ತಾವನೆಯೂ ಮಹತ್ವ ಪಡೆದಿದೆ. ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸುವ ಬಗ್ಗೆಯೂ ಸರ್ಕಾರ ಮಾಹಿತಿ ನೀಡಿದೆ.
ಇನ್ನು ಕದ್ರಿಯ ಐದು ಎಕರೆ ಜಾಗದಲ್ಲಿ ‘ಮಂಗಳೂರು ಐ’ ಯೋಜನೆ ರೂಪಿಸುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಮುಂದಿನ 15 ತಿಂಗಳಲ್ಲಿ ರಾಜ್ಯದ 10ರಿಂದ 12 ಜಿಲ್ಲೆಗಳಲ್ಲಿ ಇದೇ ರೀತಿಯ ಪ್ರಾದೇಶಿಕ ಸಚಿವ ಸಂಪುಟ ಸಭೆಗಳನ್ನು ನಡೆಸಿ ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
