ಕಾವೇರಿ ವಿವಾದ: ಕರ್ನಾಟಕಕ್ಕೆ ಮತ್ತೆ ಶಾಕ್‌, CWMA ಆದೇಶ ಪಾಲಿಸಲು ಸುಪ್ರೀಂ ಸೂಚನೆ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಇದೇ ವೇಳೆ, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಲಾಗಿದೆ.

ಹಿಂದೆ ಪೂರೈಕೆಯಾಗದ ಕಾವೇರಿ ನೀರಿನ ಕೊರತೆಯನ್ನು ಭರ್ತಿ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ತಮಿಳುನಾಡು ಮತ್ತು ಕರ್ನಾಟಕದ ಪರ ವಕೀಲರು ತಮ್ಮ ತಮ್ಮ ವಾದಗಳನ್ನು ಮಂಡಿಸಿದರು. ತಮಿಳುನಾಡು ಪರವಾಗಿ ವಾದ ಮಂಡಿಸಿದವರು, ರಾಜ್ಯದಲ್ಲಿ ಸುಮಾರು 4.5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದ್ದು, ನೀರಿನ ಕೊರತೆಯಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಕೃಷಿ ಚಟುವಟಿಕೆಗಳಿಗೆ ನೀರಿನ ಅಗತ್ಯವಿದ್ದು, ಕರ್ನಾಟಕದಿಂದ ಕಾವೇರಿ ನೀರು ಬಿಡುಗಡೆಯಾಗಬೇಕು ಎಂದು ತಮಿಳುನಾಡು ವಾದಿಸಿತು.

ಇದಕ್ಕೆ ಪ್ರತಿಯಾಗಿ ಕರ್ನಾಟಕ ತನ್ನ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ ಎಂದು ತಿಳಿಸಿತು. ಮಳೆಯ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬಂದಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 81 ಟಿಎಂಸಿ ನೀರು ಲಭ್ಯವಿತ್ತು. ಆದರೆ ಈ ವರ್ಷ ಒಳಹರಿವಿನಲ್ಲಿ ಭಾರಿ ಕೊರತೆಯಾಗಿದೆ ಎಂದು ಕರ್ನಾಟಕದ ಪರ ವಕೀಲರು ವಾದಿಸಿದರು.

CWMA ಆದೇಶ ಪಾಲನೆ ಕಷ್ಟ: ಕರ್ನಾಟಕ

CWMA ನೀರು ಬಿಡುಗಡೆಗೆ ಸಂಬಂಧಿಸಿದಂತೆ ನೀಡುತ್ತಿರುವ ಆದೇಶಗಳನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ತಿಳಿಸಿತು. ಬರ ಪರಿಸ್ಥಿತಿ ಎದುರಾದಾಗಲೆಲ್ಲಾ ರಾಜ್ಯಕ್ಕೆ ಇದೇ ರೀತಿಯ ಸಮಸ್ಯೆ ಉಂಟಾಗುತ್ತದೆ. CWMAಯ ತಜ್ಞರ ಸಮಿತಿ ಪರಿಸ್ಥಿತಿಯನ್ನು ಪರಿಶೀಲಿಸಿ ನೀರು ಬಿಡುಗಡೆ ಕುರಿತು ನಿರ್ಧಾರ ಕೈಗೊಳ್ಳುತ್ತದೆ. ಹೀಗಾಗಿ, ಹೆಚ್ಚುವರಿ ನೀರು ಬಿಡುಗಡೆಗೆ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕರ್ನಾಟಕ ಮನವಿ ಮಾಡಿತು.

ಕರ್ನಾಟಕದ ವಾದದ ವೇಳೆ, ತಮಿಳುನಾಡು ಮಾತ್ರವಲ್ಲದೆ ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲೇ ನೀರಿನ ಕೊರತೆ ಇದೆ ಎಂದು ತಿಳಿಸಲಾಯಿತು. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಲಭ್ಯತೆ, ಪರಿಸರದ ಅಗತ್ಯತೆ ಹಾಗೂ ಕೈಗಾರಿಕೆಗಳಿಗೆ ಬೇಕಾಗುವ ನೀರಿನ ಬಗ್ಗೆ ಕೂಡ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ವಾದಿಸಿತು.

ಕರ್ನಾಟಕದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಮುಂದಿನ ಹಿಂಗಾರು ಮಳೆ ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಕರ್ನಾಟಕದ ಪರ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌, CWMA ನೀಡಿರುವ ಆದೇಶಗಳ ಪಾಲನೆಯನ್ನು ಮುಂದುವರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತು. ಇದೇ ವೇಳೆ, ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿರುವ ಆಕ್ಷೇಪಕ್ಕೆ ಕರ್ನಾಟಕವು ಅಫಿಡವಿಟ್‌ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಒಂದು ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ.

CWMA ಆದೇಶದಂತೆ ಕರ್ನಾಟಕದಿಂದ ನೀರು ಬಿಡುಗಡೆಯಾಗುತ್ತಿಲ್ಲ ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಲಾಗಿದೆ.

 

Exit mobile version