ಕಾವೇರಿ ವಿವಾದ: ಇಂದು ದೆಹಲಿಯಲ್ಲಿ CWRC-CWMA ಹೈವೋಲ್ಟೇಜ್ ಸಭೆ

ಚಿಂತೆ ಕಾಡಬಹುದು.! (7)

ನವದೆಹಲಿ/ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು (ಸೆ. 8) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ನೀರು ಹಂಚಿಕೆ ವಿಚಾರ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆಯಿದೆ.

ಈ ಹಿಂದಿನ ಸಭೆಗಳಲ್ಲಿ ಸತತವಾಗಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ ಎಂಬ ಆಕ್ರೋಶ ರಾಜ್ಯದಲ್ಲಿ ವ್ಯಕ್ತವಾಗುತ್ತಿದೆ. ಇದೀಗ ಮತ್ತೊಮ್ಮೆ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ಬರುವುದೇ ಎಂಬ ಆತಂಕ ಕರ್ನಾಟಕದ ರೈತರಲ್ಲಿ ಮೂಡಿದೆ. ಹೀಗಾಗಿ ಇಂದಿನ ಸಭೆ ರಾಜ್ಯದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

40 ಟಿಎಂಸಿಗೂ ಅಧಿಕ ನೀರು ಖಾಲಿ

ಪ್ರಾಧಿಕಾರಗಳ ಹಿಂದಿನ ಆದೇಶಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಈಗಾಗಲೇ ಮೂರು ಬಾರಿ ತಮಿಳುನಾಡಿಗೆ ನೀರು ಹರಿಸಿದೆ. ಒಟ್ಟಾರೆ 40 ಟಿಎಂಸಿಗೂ ಅಧಿಕ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಪ್ರತಿ ಬಾರಿ ರಾಜ್ಯ ಸರ್ಕಾರ ನೀರು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದರೂ ಅಂತಿಮವಾಗಿ ಪ್ರಾಧಿಕಾರಗಳ ಆದೇಶಕ್ಕೆ ಮಣಿದು ನೀರು ಹರಿಸಿದೆ. ಇದರಿಂದ ರಾಜ್ಯದ ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಒತ್ತಡ ಹೆಚ್ಚಾಗಿದೆ. ಇದೀಗ ಮತ್ತೆ ನೀರು ಬಿಡುವ ಪರಿಸ್ಥಿತಿ ಎದುರಾದರೆ ಕರ್ನಾಟಕದ ರೈತರು ಹಾಗೂ ಕುಡಿಯುವ ನೀರಿನ ಅಗತ್ಯತೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ವಾಸ್ತವ ಸ್ಥಿತಿ ಮಂಡಿಸಲು ಆಗ್ರಹ

ಇಂದಿನ CWRC ಮತ್ತು CWMA ಸಭೆಯಲ್ಲಿ ಕರ್ನಾಟಕ ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಬೇಕು ಎಂಬುದು ಮಂಡ್ಯ ರೈತರ ಪ್ರಮುಖ ಆಗ್ರಹವಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಒಳಹರಿವು, ಮಳೆಯ ಕೊರತೆ, ಕುಡಿಯುವ ನೀರಿನ ಅಗತ್ಯತೆ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಜಲ ಸಂಕಷ್ಟದ ಕುರಿತು ವಸ್ತುನಿಷ್ಠ ಅಂಕಿ-ಅಂಶಗಳನ್ನು ಸಭೆಯ ಮುಂದಿಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ನೀರಿನ ಅಭಾವದ ಹಿನ್ನೆಲೆ ರೈತರಿಗೆ ಕಟ್ಟು ಪದ್ಧತಿಯಲ್ಲಿ ನೀರು ಪೂರೈಸಲಾಗುತ್ತಿದೆ. ಬೆಳೆಗಳಿಗೆ ಅಗತ್ಯ ಪ್ರಮಾಣದ ನೀರು ಸಿಗದೆ ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವುದು ಸರಿಯಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.

‘ಇನ್ನೊಂದು ಹನಿ ನೀರು ಬಿಡಬೇಡಿ’

ಕರ್ನಾಟಕದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಬಾರದು ಎಂದು ಮಂಡ್ಯ ಜಿಲ್ಲೆಯ ರೈತರು ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರು ಇಲ್ಲದಿದ್ದರೂ ನೀರು ಬಿಡುಗಡೆ ಮಾಡಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಬಹುದು. ಹೀಗಾಗಿ ಮೊದಲು ರಾಜ್ಯದ ಅಗತ್ಯತೆ, ರೈತರ ಬೆಳೆ ಹಾಗೂ ಕುಡಿಯುವ ನೀರಿನ ಬೇಡಿಕೆಯನ್ನು ಪರಿಗಣಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಮಿಳುನಾಡಿನ ರೈತರ ಬೆಳೆಗಳಿಗೆ ನೀರು ಒದಗಿಸುವುದಕ್ಕೆ ಕರ್ನಾಟಕ ವಿರೋಧಿಸುತ್ತಿಲ್ಲ. ಆದರೆ ಕರ್ನಾಟಕದ ರೈತರ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸಿ ನೀರು ಹರಿಸುವ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬುದು ರೈತರ ನಿಲುವಾಗಿದೆ.

ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ

ಇಂದಿನ ಸಭೆಯಲ್ಲಿ ಕರ್ನಾಟಕ ಸರ್ಕಾರ ಪರಿಣಾಮಕಾರಿಯಾಗಿ ವಾದ ಮಂಡಿಸಿ ರಾಜ್ಯದ ಹಿತವನ್ನು ಕಾಪಾಡಬೇಕು. ಒಂದು ವೇಳೆ ರಾಜ್ಯದ ರೈತರ ಹಿತವನ್ನು ಕಡೆಗಣಿಸಿ ಮತ್ತೆ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಕೈಗೊಂಡರೆ ರಸ್ತೆಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಂಡ್ಯ ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Exit mobile version