ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬಳ್ಳಾರಿಯ ಸರ್ಕಾರಿ ಶಾಲಾ ಮೈದಾನವನ್ನು ಬಳಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ.
ಸೆಪ್ಟೆಂಬರ್ 10ರಂದು ಬಳ್ಳಾರಿಯಲ್ಲಿ ನಡೆಯಲಿರುವ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಎಕ್ಸ್ ಮುನಿಸಿಪಲ್ ಶಾಲಾ ಮೈದಾನ ಬಳಸಲು ಬಿಜೆಪಿ ಮುಖಂಡರು ಅನುಮತಿ ಕೋರಿದ್ದರೂ, ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಮೈದಾನ ನೀಡಲು ನಿರಾಕರಿಸಿದೆ.
ಸೆಪ್ಟೆಂಬರ್ 10ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಮಾರೋಪ ಸಮಾವೇಶ ಆಯೋಜಿಸಲು ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಆವರಣ ಹಾಗೂ ಮೈದಾನಗಳನ್ನು ಖಾಸಗಿ ಸಂಸ್ಥೆಗಳು, ಸಂಘಟನೆಗಳು ಅಥವಾ ಇತರೆ ಗುಂಪುಗಳ ಕಾರ್ಯಕ್ರಮಗಳಿಗೆ ಬಳಸಲು ನೀಡಬಾರದು ಎಂಬ ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಇಲಾಖೆಯು ಅನುಮತಿ ನಿರಾಕರಿಸಿದೆ.
ಸರ್ಕಾರಿ ಆಸ್ತಿಗಳ ಬಳಕೆಗೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್ 18ರಂದು ರಾಜ್ಯ ಸಚಿವ ಸಂಪುಟವು ಮಹತ್ವದ ನಿರ್ಧಾರ ಕೈಗೊಂಡಿತ್ತು. ಶಾಲೆಗಳು, ಪಿಯು ಕಾಲೇಜುಗಳ ಮೈದಾನಗಳು, ಉದ್ಯಾನವನಗಳು ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸ್ಥಳಗಳನ್ನು ಖಾಸಗಿ ಸಂಘ-ಸಂಸ್ಥೆಗಳು ಅಥವಾ ಗುಂಪುಗಳು ಕಾರ್ಯಕ್ರಮ, ಸಮಾವೇಶ ಸೇರಿದಂತೆ ಯಾವುದೇ ಉದ್ದೇಶಕ್ಕೆ ಬಳಸಬೇಕಾದರೆ ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಮಾರ್ಗಸೂಚಿ ರೂಪಿಸಲಾಗಿತ್ತು.
ಇದೇ ನಿಯಮವನ್ನು ಮುಂದಿಟ್ಟುಕೊಂಡು ಬಳ್ಳಾರಿ ಚಲೋ ಸಮಾರೋಪಕ್ಕೆ ಮೈದಾನ ನೀಡಲು ನಿರಾಕರಿಸಲಾಗಿದೆ. ಹೀಗಾಗಿ ಬಿಜೆಪಿ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಇದೀಗ ಪರ್ಯಾಯ ಸ್ಥಳದ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.
ಇದರ ನಡುವೆ, ಸರ್ಕಾರಿ ಆಸ್ತಿಗಳು ಮತ್ತು ಸಾರ್ವಜನಿಕ ಸ್ಥಳಗಳ ಬಳಕೆಗೆ ಸಂಬಂಧಿಸಿದ ಸರ್ಕಾರದ ನಿಯಮದ ವಿರುದ್ಧವೂ ಕಾನೂನು ಹೋರಾಟ ನಡೆಯುತ್ತಿದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಧಾರವಾಡ ಪೀಠವು ಈ ಹಿಂದೆ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವ ಹಿನ್ನೆಲೆ ಪ್ರಕರಣದ ವಿಚಾರಣೆ ಮುಂದುವರಿದಿದೆ.
ಈ ಬೆಳವಣಿಗೆಯ ನಡುವೆ ಬಿಜೆಪಿ ನಡೆಸುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಂಡೂರು ವಿಧಾನಸಭಾ ಕ್ಷೇತ್ರದಿಂದ ಪಾದಯಾತ್ರೆ ಆರಂಭವಾಗಿದ್ದು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಬಳ್ಳಾರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ನಾಳೆ ಪಾದಯಾತ್ರೆ ಬಳ್ಳಾರಿ ನಗರ ತಲುಪಲಿದ್ದು, ಬಳಿಕ ಸೆಪ್ಟೆಂಬರ್ 10ರಂದು ಬೃಹತ್ ಸಮಾರೋಪ ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಆದರೆ ಸಮಾರೋಪಕ್ಕೆ ನಿಗದಿಪಡಿಸಿದ್ದ ಮೈದಾನಕ್ಕೆ ಅನುಮತಿ ಸಿಗದಿರುವುದು ಬಿಜೆಪಿಗೆ ಹೊಸ ಸವಾಲಾಗಿ ಪರಿಣಮಿಸಿದೆ.
