ಬಿಗ್ ಬಾಸ್ ಶೋಗೆ ತಡೆ; ಹೈಕೋರ್ಟ್‌ ಮೊರೆ ಹೋದ ಆಯೋಜಕರು..ಇಂದು ವಿಚಾರಣೆ

Untitled design 2025 10 08t110637.949

ಬೆಂಗಳೂರಿನ ರಾಮನಗರದ ಜಾಲಿಡೇಸ್ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ (ಸೀಸನ್ 12) ಶೂಟಿಂಗ್‌ಗೆ ಜಿಲ್ಲಾಡಳಿತವು ತಡೆಯೊಡ್ಡಿದೆ. ಈ ಕ್ರಮವನ್ನು ಪ್ರಶ್ನಿಸಿ ಶೋ ಆಯೋಜಕರು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಸ್ಟುಡಿಯೋಗೆ ಬೀಗ ಹಾಕಿರುವುದರಿಂದ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸ್ಪರ್ಧಿಗಳನ್ನು ಈಗ ಈಗಲ್‌ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ.

ಜಾಲಿಡೇಸ್ ಸ್ಟುಡಿಯೋಸ್‌ನಲ್ಲಿ ಶೂಟಿಂಗ್‌ಗೆ ಅಗತ್ಯವಾದ ಪರವಾನಗಿಗಳಿಲ್ಲದಿರುವುದು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯೇ ಈ ತಡೆಗೆ ಕಾರಣ ಎಂದು ಜಿಲ್ಲಾಡಳಿತ ಹೇಳಿದೆ. ಈಗ ಆಯೋಜಕರು, ಹಿರಿಯ ವಕೀಲೆ ತೇಜಸ್ವಿನಿ ಅರೂರ್ ಮೂಲಕ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಇಂದು ಮಧ್ಯಾಹ್ನ 2:30ಕ್ಕೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠದಲ್ಲಿ ತುರ್ತು ವಿಚಾರಣೆ ನಡೆಯಲಿದೆ. ಅರ್ಜಿಯಲ್ಲಿ ಜಿಲ್ಲಾಡಳಿತದ ಕ್ರಮವನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗುವ ಸಾಧ್ಯತೆಯಿದೆ.

ಬಿಗ್ ಬಾಸ್ ಶೋಗೆ ಸಂಬಂಧಿಸಿದಂತೆ ಈಗಾಗಲೇ ಕೋಟ್ಯಾಂತರ ರೂಪಾಯಿಗಳ ವೆಚ್ಚವಾಗಿದೆ. ಸೆಟ್ ನಿರ್ಮಾಣ, ಸ್ಪರ್ಧಿಗಳ ವಸತಿ, ತಾಂತ್ರಿಕ ವ್ಯವಸ್ಥೆ ಮತ್ತು ಇತರ ಖರ್ಚುಗಳಿಗಾಗಿ ಭಾರೀ ಹೂಡಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಆಯೋಜಕರು ಕೋರ್ಟ್‌ನಲ್ಲಿ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಭರವಸೆ ನೀಡಿ, ಶೂಟಿಂಗ್ ಮುಂದುವರೆಸಲು ಅವಕಾಶ ಕೋರಬಹುದು. ಅಗತ್ಯ ಪರವಾನಗಿಗಳನ್ನು ತಕ್ಷಣವೇ ಪಡೆಯುವುದಾಗಿ ಒಪ್ಪಿಕೊಂಡು, ದಂಡವನ್ನು ತೆರವುಗೊಳಿಸುವ ಬಗ್ಗೆಯೂ ಚಿಂತನೆ ನಡೆಸಬಹುದು.

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ, ಹೈಕೋರ್ಟ್ ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. ಆಯೋಜಕರು ಜಾಲಿಡೇಸ್ ಸ್ಟುಡಿಯೋದಲ್ಲಿಯೇ ಶೂಟಿಂಗ್ ಮುಂದುವರೆಸಲು ಪ್ರಯತ್ನಿಸಬಹುದು ಅಥವಾ ಬೇರೆ ಸ್ಥಳಕ್ಕೆ ಶಿಫ್ಟ್ ಆಗುವ ಸಾಧ್ಯತೆಯೂ ಇದೆ.

Exit mobile version