ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಟಾಪ್ 6 ಸ್ಪರ್ಧಿಗಳ ಆಯ್ಕೆಗಾಗಿ ನಡೆಯುತ್ತಿದ್ದ ತೀವ್ರ ಪೈಪೋಟಿಯ ನಡುವೆ, ಅನಿರೀಕ್ಷಿತವಾಗಿ ನಡೆದ ಮಿಡ್-ವೀಕ್ ಎಲಿಮಿನೇಷನ್‌ನಲ್ಲಿ ಸ್ಪರ್ಧಿ ಎನಿಸಿಕೊಂಡಿದ್ದ ಧ್ರುವಂತ್ ಮನೆಯಿಂದ ಹೊರಬಿದ್ದಿದ್ದಾರೆ. ಕಿಚ್ಚ ಸುದೀಪ್ ಅವರಿಂದ ಇಡೀ ಸೀಸನ್‌ಗೆ ಚಪ್ಪಾಳೆ ಪಡೆದ ಕೆಲವೇ ದಿನಗಳಲ್ಲಿ ಧ್ರುವಂತ್ ನಿರ್ಗಮಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಚರ್ಚೆಗೆ ಕಾರಣವಾಗಿದೆ.
ಕಿಚ್ಚನ ಚಪ್ಪಾಳೆ ವಿವಾದ
ಈ ಸೀಸನ್‌ನಲ್ಲಿ ಧ್ರುವಂತ್ ನೀಡಿದ ಮನರಂಜನೆಯನ್ನು ಮೆಚ್ಚಿ ಕಿಚ್ಚ ಸುದೀಪ್ ಅವರು ಇಡೀ ಸೀಸನ್‌ನ ಚಪ್ಪಾಳೆಯನ್ನು ಅವರಿಗೆ ನೀಡಿದ್ದರು. ಆದರೆ, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಅರ್ಹತೆ ಇಲ್ಲದಿದ್ದರೂ ಧ್ರುವಂತ್‌ಗೆ ಚಪ್ಪಾಳೆ ನೀಡಲಾಗಿದೆ, ಈ ಗೌರವ ಗಿಲ್ಲಿ ನಟನಿಗೆ ಸಿಗಬೇಕಿತ್ತು ಎಂದು ಅನೇಕ ವೀಕ್ಷಕರು ಅಭಿಪ್ರಾಯಪಟ್ಟಿದ್ದರು. ಚಪ್ಪಾಳೆ ಸಿಕ್ಕ ಬೆನ್ನಲ್ಲೇ ಧ್ರುವಂತ್ ಎಲಿಮಿನೇಟ್ ಆಗಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಒನ್ ಮ್ಯಾನ್ ಆರ್ಮಿ ಮತ್ತು ಟ್ರೋಲ್
ಧ್ರುವಂತ್ ಬಿಗ್ ಬಾಸ್ ಮನೆಯೊಳಗೆ ತಮ್ಮದೇ ಆದ ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದು ಸಹ-ಸ್ಪರ್ಧಿ ರಾಶಿಕಾ ಹೇಳಿದ್ದರು.ಕ್ಯಾಮೆರಾ ಮುಂದೆ ನಿಂತು, ನಾನು ಒನ್ ಮ್ಯಾನ್ ಆರ್ಮಿಯಾಗಿ ಆಡಿದ್ದೇನೆ, ಎಲ್ಲರನ್ನೂ ಆಚೆ ಕಳುಹಿಸಿ ಈಗ ನಾನೊಬ್ಬನೇ ಇದ್ದೇನೆ ಎಂದು ಅವರು ಹೇಳಿಕೊಂಡಿದ್ದು ಭಾರಿ ಟ್ರೋಲ್‌ಗೆ ಕಾರ್ನವಾಗಿತ್ತು ಈ ಹೇಳಿಕೆ. ಅವರ ಅತಿಯಾದ ಆತ್ಮವಿಶ್ವಾಸ ಮತ್ತು ಕೆಲವೊಮ್ಮೆ ವ್ಯಕ್ತಪಡಿಸುತ್ತಿದ್ದ ಅಹಂಕಾರದ ಮಾತುಗಳೇ ಅವರ ಎಲಿಮಿನೇಷನ್‌ಗೆ ಕಾರಣವಾಗಿರಬಹುದು ಎಂದು ಕೇಳಿಬರುತ್ತಿವೆ.
ಅರ್ಹತೆಯ ಬಗ್ಗೆ ಚರ್ಚೆ:
ಧ್ರುವಂತ್ ನಿರ್ಗಮನದ ನಂತರ ಕಲರ್ಸ್ ಕನ್ನಡ ವಾಹಿನಿಯ ಪೇಜ್‌ನಲ್ಲಿ ಕಾಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ಕಾವ್ಯ ಶೈವ ಅವರಿಗಿಂತ ಧ್ರುವಂತ್ ಉತ್ತಮವಾಗಿ ಆಡುತ್ತಿದ್ದರು, ಅವರನ್ನು ಉಳಿಸಿಕೊಳ್ಳಬೇಕಿತ್ತು ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಚಪ್ಪಾಳೆ ಪಡೆದವರು ಮನೆಯಿಂದ ಹೊರಬರುವುದು ಬಿಗ್ ಬಾಸ್ ಇತಿಹಾಸದಲ್ಲೇ ವಿಚಿತ್ರ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಅಶ್ವಿನಿ ಗೌಡ, ಗಿಲ್ಲಿ ನಟ, ರಘು, ರಕ್ಷಿತಾ ಶೆಟ್ಟಿ ಮತ್ತು ಕಾವ್ಯ ಶೈವ ನಡುವೆ ನಡೆದ ಈ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಧ್ರುವಂತ್ ಸೋಲೊಪ್ಪಿಕೊಂಡಿದ್ದಾರೆ. ಧನುಷ್ ಗೌಡ ಈಗಾಗಲೇ ಟಾಪ್ 6 ಸ್ಥಾನ ಭದ್ರಪಡಿಸಿಕೊಂಡಿದ್ದು, ಉಳಿದವರಲ್ಲಿ ಯಾರು ಫಿನಾಲೆ ಹಂತಕ್ಕೆ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚಿದೆ.
