ಚಿನ್ನಸ್ವಾಮಿಯಲ್ಲಿ ಮತ್ತೆ ನಡೆಯುತ್ತಾ ಐಪಿಎಲ್ ? ಸುರಕ್ಷತಾ ಮಾರ್ಗಸೂಚಿ ಪಾಲನೆಗೆ ಕೆಎಸ್‌ಸಿಎಗೆ ಪೊಲೀಸ್ ಖಡಕ್ ಸೂಚನೆ

Untitled design 2026 01 14T230036.449

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಅಂತರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳು ನಡೆಯುತ್ತವೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗಬೇಕಿದೆ. ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪದಾಧಿಕಾರಿಗಳು ಮತ್ತು ಬೆಂಗಳೂರು ನಗರ ಪೊಲೀಸರ ನಡುವೆ ಮಹತ್ವದ ಸಭೆ ನಡೆದಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕ್ರೀಡಾಂಗಣದ ಭದ್ರತೆ ಮತ್ತು ಪ್ರೇಕ್ಷಕರ ಸುರಕ್ಷತೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಸಭೆಯ ನಂತರ ಮಾತನಾಡಿದ ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ, ಗೃಹ ಸಚಿವರು ರಚಿಸಿರುವ ವಿಶೇಷ ಸಮಿತಿಯು ನೀಡಿರುವ ಮಾರ್ಗಸೂಚಿಗಳ ಅನ್ವಯ ಕ್ರೀಡಾಂಗಣದಲ್ಲಿ ಬದಲಾವಣೆಗಳನ್ನು ಮಾಡಬೇಕಿದೆ. ಎಲ್ಲಾ ಲೋಪದೋಷಗಳನ್ನು ಸರಿಪಡಿಸಿದ ನಂತರವಷ್ಟೇ ಗೃಹ ಸಚಿವರು ಮತ್ತು ಸಮಿತಿಯು ಪಂದ್ಯಗಳ ಆಯೋಜನೆಗೆ ಒಪ್ಪಿಗೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಈ ಭಿಕರ ಘಟನೆಯ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಸ್ಟೇಡಿಯಂನಲ್ಲಿರುವ ಗೇಟ್‌ಗಳು ಕಿರಿದಾಗಿದ್ದು, ತುರ್ತು ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮುಖ್ಯವಾಗಿ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಂತಹವರು ಮೈದಾನಕ್ಕೆ ಬರುವಾಗ ಹೊರಭಾಗದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಗೇಟ್ ಅಗಲೀಕರಣ ಮತ್ತು ಜನದಟ್ಟಣೆ ನಿರ್ವಹಣೆಗೆ ಪೂರಕವಾದ ಮೂಲಸೌಕರ್ಯಗಳನ್ನು ವೃದ್ಧಿಸದ ಹೊರತು ಪಂದ್ಯಗಳಿಗೆ ಅನುಮತಿ ನೀಡುವುದು ಅಸಾಧ್ಯ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮಹಿಳಾ ವಿಶ್ವಕಪ್ ಪಂದ್ಯಗಳ ಆಯೋಜನೆಯೂ ಸುರಕ್ಷತಾ ಕಾರಣಗಳಿಂದ ಕೈತಪ್ಪಿ ಹೋಗಿತ್ತು. ಹೀಗಾಗಿ, ಪ್ರೇಕ್ಷಕರಿಲ್ಲದೆಯೇ (Closed doors) ಪಂದ್ಯಗಳನ್ನು ಆಯೋಜಿಸಲು ವೆಂಕಟೇಶ್ ಪ್ರಸಾದ್ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದರು. ಆದರೆ, ಸದ್ಯಕ್ಕೆ ಪಂದ್ಯಗಳನ್ನು ನಗರದ ಹೊರವಲಯದ ಕ್ರೀಡಾಂಗಣಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಹಬ್ಬ ಮತ್ತೆ ಮರಳಬೇಕಾದರೆ ಕೆಎಸ್‌ಸಿಎ ಸಮಿತಿಯ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಿದೆ ಎಂದು ಸಭೆ ಬಳಿಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದು, ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯ ನೋಡಲು ಕಾತುರರಾಗಿದ್ದಾರೆ.

Exit mobile version