“ವಿನ್ ಅನ್ನೋದು ನನ್ನ ಹಣೆಬರಹದಲ್ಲಿ ಬರೆದಿಲ್ಲವೆನೋ”: ಕಿಚ್ಚ ಸುದೀಪ್‌ ಎದುರು ಗಿಲ್ಲಿ ಹೇಳಿಕೆ

Untitled design 2026 01 18T164143.948

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಸೀಸನ್ ನಲ್ಲಿ ಮನರಂಜನೆ, ವಿವಾದ, ಭಾವನಾತ್ಮಕ ಕ್ಷಣಗಳು ಹಾಗೂ ಸ್ಪರ್ಧಿಗಳ ನಡುವಿನ ತೀವ್ರ ಪೈಪೋಟಿಯಿಂದ ಜನಮನ ಸೆಳೆದಿದ್ದು, ಇದೀಗ ಫಿನಾಲೆ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಕೆಲವೇ ಗಂಟೆಗಳಲ್ಲಿ ಕಿಚ್ಚ ಸುದೀಪ್ ಅವರು ಈ ಸೀಸನ್‌ನ ವಿನ್ನರ್ ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಹೊಸ ಪ್ರೋಮೋ ಈಗಾಗಲೇ ಭಾರೀ ಸಂಚಲನ ಸೃಷ್ಟಿಸಿದೆ. 24 ಜನ ಸ್ಪರ್ಧಿಗಳಿಂದ ಆರಂಭವಾದ ಈ ರೇಸ್‌ನಲ್ಲಿ ಅಂತಿಮವಾಗಿ ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು ಹಾಗೂ ರಕ್ಷಿತಾ ಶೆಟ್ಟಿ ಫಿನಾಲೆಗೆ ಪ್ರವೇಶಿಸಿದ್ದಾರೆ. ಈ ಆರು ಜನರಲ್ಲಿ ಒಬ್ಬರು ಮಾತ್ರ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಟ್ರೋಫಿಯನ್ನು ಎತ್ತಿ ಹಿಡಿಯಲಿದ್ದಾರೆ.

ಪ್ರೋಮೋದಲ್ಲಿ ಕಿಚ್ಚ ಸುದೀಪ್, “24 ಜನರಲ್ಲಿ ಲಾಸ್ಟ್ ಆರನೇ ಸ್ಥಾನಕ್ಕೆ ಯಾರು ಬರಬೇಕು?” ಎಂದು ಸ್ಪರ್ಧಿಗಳ ಮುಂದೆ ಪ್ರಶ್ನೆ ಇಟ್ಟಿದ್ದಾರೆ. ಈ ವೇಳೆ ಸ್ಪರ್ಧಿಗಳು ತಮ್ಮ ಭಾವನೆಗಳನ್ನು ಬಹಿರಂಗಪಡಿಸಿದ್ದು, ಪ್ರೇಕ್ಷಕರ ಮನಸ್ಸಿಗೆ ನೇರವಾಗಿ ತಟ್ಟಿದೆ. ಕಾವ್ಯಾ ಶೈವ, “ನನ್ನ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರೆ, ಧನುಷ್ “ಮುಂದಕ್ಕೆ ಹೋಗಬೇಕು ಎನ್ನುವ ಆಸೆ ಇದೆ” ಎಂದು ತಮ್ಮ ಗುರಿಯನ್ನು ಸ್ಪಷ್ಟಪಡಿಸಿದ್ದಾರೆ.

ಅಶ್ವಿನಿ ಗೌಡ ಅವರು, “ನಾನು ನನ್ನನ್ನು ಸಂಪೂರ್ಣವಾಗಿ ಈ ಮನೆಯೊಳಗೆ ಡೆಡಿಕೆಟ್ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ. ಆದರೆ ಪ್ರೋಮೋದಲ್ಲೇ ಹೆಚ್ಚು ಗಮನ ಸೆಳೆದಿದ್ದು ಗಿಲ್ಲಿ ನಟನ ಹೇಳಿಕೆ. “ವಿನ್ ಅನ್ನೋದು ನನ್ನ ಹಣೆಬರಹದಲ್ಲಿ ಬರೆದಿಲ್ಲವೆನೋ ಅಂತ ಅಂದುಕೊಳ್ಳಬೇಕಾಗುತ್ತದೆ” ಎಂದು ಗಿಲ್ಲಿ ಹೇಳಿದ್ದಾನೆ..

ಇನ್ನೂ ಆರನೇ ಸ್ಥಾನಕ್ಕೆ ಬಂದಿರುವ ವೋಟ್‌ಗಳು ಯಾರಿಗೆ ಸೇರಿವೆ ಎಂಬುದನ್ನು ನಿಮ್ಮ ಮುಂದೆಯೇ ತೆರೆದುಕೊಳ್ಳಲಾಗುತ್ತದೆ ಎಂದು ಸುದೀಪ್ ತಿಳಿಸಿದ್ದಾರೆ. ಇದರೊಂದಿಗೆ ಫಿನಾಲೆಯ ಮೊದಲ ಎಲಿಮಿನೇಷನ್ ಯಾರು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಹಲವು ಊಹಾಪೋಹಗಳು ಶುರುವಾಗಿದೆ. ಕೆಲವರು ಧನುಷ್ ಅವರೇ ಮೊದಲ ಎಲಿಮಿನೇಷನ್ ಆಗಿದ್ದಾರೆ ಎಂದು ಹೇಳುತ್ತಿದ್ದರೂ, ವಾಹಿನಿ ಅಥವಾ ಬಿಗ್ ಬಾಸ್ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಎಲ್ಲಕ್ಕೂ ಉತ್ತರ ಇಂದು ರಾತ್ರಿ ಪ್ರಸಾರವಾಗುವ ಗ್ರ್ಯಾಂಡ್ ಫಿನಾಲೆಯಲ್ಲಿ ಸಿಗಲಿದೆ.

ಇದೇ ವೇಳೆ ಮತ್ತೊಂದು ದೊಡ್ಡ ವಿಚಾರ ಪ್ರೇಕ್ಷಕರ ಗಮನ ಸೆಳೆದಿದೆ. ಕಿಚ್ಚ ಸುದೀಪ್ ಅವರು ಇತ್ತೀಚಿನ ಪ್ರೋಮೋದಲ್ಲಿ, ಈ ಸೀಸನ್‌ನಲ್ಲಿ ಒಬ್ಬ ಸ್ಪರ್ಧಿಗೆ ದಾಖಲೆ ಮಟ್ಟದ 37 ಕೋಟಿ ಮತಗಳು ಬಂದಿವೆ ಎಂದು ಘೋಷಿಸಿದ್ದರು. ಈ ಭಾರೀ ಮತಗಳು ಗಿಲ್ಲಿ ನಟನಿಗೆ ಬಂದಿವೆ ಎಂಬುದು ಬಹುತೇಕ ವೀಕ್ಷಕರ ಊಹೆ. ಇದರಿಂದಾಗಿ ಗಿಲ್ಲಿಯೇ ವಿನ್ನರ್ ಫೇವರಿಟ್ ಎಂಬ ಮಾತುಗಳು ಜೋರಾಗಿವೆ.

ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12 ಅಪಾರ ಕ್ರೇಜ್ ಕ್ರಿಯೇಟ್ ಮಾಡಿದ್ದು, ಫಿನಾಲೆ ಕ್ಷಣವನ್ನು ಕಾದು ನೋಡುವಂತೆ ಮಾಡಿದೆ. ಯಾರು ಟ್ರೋಫಿ ಗೆಲ್ಲುತ್ತಾರೆ? ಯಾರು ಮೊದಲಿಗೆ ಎಲಿಮಿನೇಟ್ ಆಗುತ್ತಾರೆ? 37 ಕೋಟಿ ಮತಗಳ ಹಿಂದೆ ಇರುವ ಸ್ಪರ್ಧಿ ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗೋದು ಇಂದು ರಾತ್ರಿ ನಡೆಯುವ ಗ್ರ್ಯಾಂಡ್ ಫಿನಾಲೆಯಲ್ಲಿ.

Exit mobile version