ಬೆಂಗಳೂರು: ಬೆಂಗಳೂರಿನ ವಿದ್ಯಾರಣ್ಯಪುರದಿಂದ ಕಳೆದ ಜನವರಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಬರೋಬ್ಬರಿ ಎಂಟು ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ತನಿಷ್ಕಾ ಮತ್ತು ತೇಜಸ್ವಿನಿ ಎಂಬ ಇಬ್ಬರು ಯುವತಿಯರನ್ನು ಸಿಐಡಿ ಪೊಲೀಸರು ಪತ್ತೆಹಚ್ಚಿದ್ದಾರೆ.
ತನಿಷ್ಕಾ ದ್ವಿತೀಯ ಪಿಯುಸಿ ಹಾಗೂ ತೇಜಸ್ವಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಜನವರಿ 31ರಂದು ಮನೆಯಿಂದ ಕಾಲೇಜಿಗೆ ತೆರಳುವುದಾಗಿ ಹೇಳಿ ಹೊರಟ ಬಳಿಕ ನಾಪತ್ತೆಯಾಗಿದ್ದರು. ಯುವತಿಯರು ಮೊಬೈಲ್ ಫೋನ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಬಳಸದೇ ಇದ್ದ ಹಿನ್ನೆಲೆ ಅವರ ಚಲನವಲನ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು.
ಯುವತಿಯರು ಕಾಣೆಯಾಗುತ್ತಿದ್ದಂತೆ ಕುಟುಂಬಸ್ಥರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಹಲವು ತಿಂಗಳುಗಳ ಕಾಲ ಯಾವುದೇ ಸುಳಿವು ದೊರೆಯಲಿಲ್ಲ.
ಹೈಕೋರ್ಟ್ ಮೆಟ್ಟಿಲೇರಿದ್ದ ಕುಟುಂಬ
ತನಿಷ್ಕಾ ಪತ್ತೆಯಾಗದ ಹಿನ್ನೆಲೆ ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು. ಯುವತಿಯರ ಪತ್ತೆಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯದ ಗಮನ ಸೆಳೆಯಲಾಗಿತ್ತು.
ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಹೈಕೋರ್ಟ್ ನಿರ್ದೇಶನದ ಹಿನ್ನೆಲೆ ಸಿಐಡಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡು ಕಳೆದ ಮೂರು ತಿಂಗಳಿನಿಂದ ವಿವಿಧ ಆಯಾಮಗಳಲ್ಲಿ ಯುವತಿಯರಿಗಾಗಿ ಶೋಧ ನಡೆಸಿದ್ದರು.
ತನಿಖೆಯ ವೇಳೆ ಇಬ್ಬರೂ ಯುವತಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಅಧಿಕಾರಿಗಳಿಗೆ ಸಿಕ್ಕಿತ್ತು. ಅಲ್ಲಿದ್ದ ಸಂದರ್ಭದಲ್ಲಿ ಇಬ್ಬರು ಯುವತಿಯರು ಮಗುವೊಂದರೊಂದಿಗೆ ಆಟವಾಡುತ್ತಿರುವುದನ್ನು ಕಂಡ ಮಗುವಿನ ತಾಯಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು ಎನ್ನಲಾಗಿದೆ. ಈ ಫೋಟೋ ತನಿಖೆಗೆ ಸುಳಿವಾಗಿದ್ದರೂ, ಬಳಿಕ ಯುವತಿಯರ ನಿಖರ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ.
ಆಧಾರ್ ಬಳಕೆಯಿಂದ ಸಿಕ್ಕ ಮಹತ್ವದ ಸುಳಿವು
ತನಿಖೆ ಮುಂದುವರಿದ ಸಂದರ್ಭದಲ್ಲಿ ತನಿಷ್ಕಾ ಹೊಸ ಸಿಮ್ ಕಾರ್ಡ್ ಪಡೆಯಲು ಮುಂದಾಗಿದ್ದಳು ಎನ್ನಲಾಗಿದೆ. ಈ ವೇಳೆ ಆಧಾರ್ ಆಧಾರಿತ ದೃಢೀಕರಣ ಪ್ರಕ್ರಿಯೆಯಲ್ಲಿ ಆಕೆಯ ಆಧಾರ್ ಸಂಖ್ಯೆಯ ಬಳಕೆಯ ಮಾಹಿತಿ ಸರ್ವಿಸ್ ಪ್ರೊವೈಡರ್ ಮೂಲಕ ಪೊಲೀಸರಿಗೆ ಲಭ್ಯವಾಗಿದೆ.
ಈ ಹಿಂದೆ ನ್ಯಾಯಾಲಯದ ಆದೇಶದ ಮೂಲಕ ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪೊಲೀಸರಿಗೆ ನೀಡುವ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. ಆಧಾರ್ ದೃಢೀಕರಣದ ಮಾಹಿತಿ ಸಿಕ್ಕ ಬಳಿಕ ಸಿಐಡಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತನಿಷ್ಕಾ ಮತ್ತು ತೇಜಸ್ವಿನಿ ಇಬ್ಬರೂ ಪತ್ತೆಯಾಗಿದ್ದಾರೆ.
ಯುವಕನ ಪರಿಚಯ, ಬಳಿಕ ಮದುವೆ
ಸಿಐಡಿ ತನಿಖೆಯ ಪ್ರಕಾರ, ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಸಂದರ್ಭದಲ್ಲಿ ತನಿಷ್ಕಾಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು ಎನ್ನಲಾಗಿದೆ. ಯುವಕನ ಕುಟುಂಬದ ವಿಚಾರಣೆ ವೇಳೆ ತನಿಷ್ಕಾ ತನ್ನೊಂದಿಗೆ ಇರುವ ತೇಜಸ್ವಿನಿ ತನ್ನ ಸಹೋದರಿ ಎಂದು ಹೇಳಿಕೊಂಡಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಇಬ್ಬರೂ ಯುವಕನೊಂದಿಗೆ ತೆರಳಿದ್ದರು ಎನ್ನಲಾಗಿದೆ. ನಂತರ ತನಿಷ್ಕಾ ಆ ಯುವಕನನ್ನು ವಿವಾಹವಾಗಿದ್ದು, ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತೇಜಸ್ವಿನಿಯನ್ನು ತನ್ನ ತಂಗಿ ಎಂದು ಪರಿಚಯಿಸಿ ತನ್ನೊಂದಿಗೇ ಇರಿಸಿಕೊಂಡಿದ್ದಳು ಎನ್ನಲಾಗಿದೆ.
ತನಿಷ್ಕಾಳ ಪತಿ ಮಲ್ಲೇಶ್ವರಂನಲ್ಲಿರುವ ಹೊಳಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಸ್ವಗ್ರಾಮಕ್ಕೆ ತೆರಳುತ್ತಿದ್ದ ಎಂದು ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ತನಿಷ್ಕಾ ಗರ್ಭಿಣಿಯಾಗಿದ್ದು, ತಾಯಿ ಕಾರ್ಡ್ ಮಾಡಿಸಲು ಮುಂದಾದ ಸಂದರ್ಭದಲ್ಲಿ ಆಧಾರ್ ದೃಢೀಕರಣದ ಅಗತ್ಯವಿತ್ತು. ಇದೇ ಪ್ರಕ್ರಿಯೆ ಪ್ರಕರಣದ ತನಿಖೆಗೆ ಮಹತ್ವದ ತಿರುವು ನೀಡಿದೆ.
ಹೈಕೋರ್ಟ್ ಮುಂದೆ ಹಾಜರು
ಎಂಟು ತಿಂಗಳ ಬಳಿಕ ಇಬ್ಬರೂ ಯುವತಿಯರು ಪತ್ತೆಯಾಗಿರುವ ಹಿನ್ನೆಲೆ ಸಿಐಡಿ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ. ಇಬ್ಬರನ್ನೂ ಹೈಕೋರ್ಟ್ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
