ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಉತ್ಸವದ ಮೊದಲ ದಿನವೇ ನಗರದಾದ್ಯಂತ ಬರೋಬ್ಬರಿ 1,84,628 ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಲ್ಲಿ ಪರಿಸರ ಸ್ನೇಹಿ ಹಾಗೂ ಸುರಕ್ಷಿತ ವಿಸರ್ಜನೆಗೆ ಕೈಗೊಂಡಿದ್ದ ವ್ಯವಸ್ಥೆಗಳ ಮೂಲಕ ಭಕ್ತರು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದಾರೆ.
ಜಿಬಿಎ ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶದ ಪ್ರಕಾರ, ಐದು ಪಾಲಿಕೆಗಳ ಪೈಕಿ ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ನಡೆದಿದೆ. ಇಲ್ಲಿ ಒಟ್ಟು 1,20,079 ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ನಂತರದ ಸ್ಥಾನದಲ್ಲಿ ಸೆಂಟ್ರಲ್ ವಲಯವಿದ್ದು, ಇಲ್ಲಿ 28,860 ಗಣಪತಿ ಮೂರ್ತಿಗಳಿಗೆ ವಿಸರ್ಜನೆ ನೆರವೇರಿಸಲಾಗಿದೆ.
ಉಳಿದಂತೆ ಉತ್ತರ ವಲಯದಲ್ಲಿ 16,857, ದಕ್ಷಿಣ ವಲಯದಲ್ಲಿ 10,372 ಹಾಗೂ ಪೂರ್ವ ವಲಯದಲ್ಲಿ 8,460 ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗಾಗಿ ವಿಸರ್ಜನೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಜಿಬಿಎ ಕಲ್ಪಿಸಿತ್ತು.
659 ಸಂಚಾರಿ ಟ್ಯಾಂಕರ್‌ಗಳ ವ್ಯವಸ್ಥೆ
ಗಣೇಶ ಮೂರ್ತಿಗಳ ವಿಸರ್ಜನೆಯಿಂದ ನಗರದ ಕೆರೆಗಳು ಹಾಗೂ ಜಲಮೂಲಗಳು ಕಲುಷಿತವಾಗದಂತೆ ಜಿಬಿಎ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು. ನಗರದ 42 ಪ್ರಮುಖ ಕೆರೆಗಳ ಆವರಣದಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಕಲ್ಯಾಣಿಗಳನ್ನು ನಿರ್ಮಿಸಲಾಗಿತ್ತು. ಇದರ ಜತೆಗೆ ವಾರ್ಡ್‌ಗಳ ಮಟ್ಟದಲ್ಲಿ ಒಟ್ಟು 659 ಸಂಚಾರಿ ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿತ್ತು.
ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆಯಿಂದ ಸಾರ್ವಜನಿಕರು ತಮ್ಮ ಮನೆ ಹಾಗೂ ಸ್ಥಳೀಯ ಗಣೇಶೋತ್ಸವಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ಸಮೀಪದಲ್ಲೇ ವಿಸರ್ಜಿಸಲು ಅನುಕೂಲವಾಯಿತು. ಕೆರೆಗಳ ಮೇಲೆ ಒತ್ತಡ ಕಡಿಮೆ ಮಾಡುವುದರ ಜತೆಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಈ ವ್ಯವಸ್ಥೆ ಸಹಕಾರಿಯಾಗಿದೆ.
ಏಕಗವಾಕ್ಷಿ ಕೇಂದ್ರಗಳ ಮೂಲಕ ತ್ವರಿತ ಅನುಮತಿ
ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರಿಗೆ ಅನುಕೂಲವಾಗುವಂತೆ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಒಟ್ಟು 122 ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿತ್ತು. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ನೀಡಲು ಈ ಕೇಂದ್ರಗಳ ಮೂಲಕ ವ್ಯವಸ್ಥೆ ಮಾಡಲಾಗಿತ್ತು.
ಇದಲ್ಲದೆ, ನಗರದ ವಿವಿಧ ವಿಸರ್ಜನಾ ಸ್ಥಳಗಳು, ಮೊಬೈಲ್ ಟ್ಯಾಂಕರ್‌ಗಳು ಹಾಗೂ ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಜಿಬಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಇದರಿಂದ ಗಣೇಶೋತ್ಸವ ಆಯೋಜಕರು ತಮ್ಮ ಸಮೀಪದ ವಿಸರ್ಜನಾ ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗಿದೆ.
ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಒತ್ತು
ಈ ಬಾರಿ ಗಣೇಶೋತ್ಸವದಲ್ಲಿ ಪರಿಸರ ಸ್ನೇಹಿ ಆಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಣ್ಣಿನ ಗಣಪತಿ ಮೂರ್ತಿಗಳ ಬಳಕೆಗೆ ಪ್ರೋತ್ಸಾಹ ನೀಡಲಾಗಿದ್ದು, ಜಲಮೂಲಗಳ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮೂರ್ತಿಗಳ ಮಾರಾಟ ಹಾಗೂ ಬಳಕೆಯ ನಿಯಂತ್ರಣಕ್ಕೆ ನಿಗಾ ವಹಿಸಲಾಗಿದೆ.
