ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 18 ಮತ್ತು 19ರಂದು ಕರ್ನಾಟಕಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಹುಬ್ಬಳ್ಳಿ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಅಮಿತ್ ಶಾ ಅವರ ರಾಜ್ಯ ಪ್ರವಾಸದ ಹಿನ್ನೆಲೆ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.
ಸೆಪ್ಟೆಂಬರ್ 18ರಂದು ರಾತ್ರಿ ಸುಮಾರು 10 ಗಂಟೆಗೆ ಅಮಿತ್ ಶಾ ಅವರು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿರುವ ಅವರು, ಮರುದಿನ ಬೆಳಗ್ಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 19ರಂದು ಬೆಳಗ್ಗೆ ಹುಬ್ಬಳ್ಳಿಯ ಹೊರವಲಯದಲ್ಲಿರುವ ಗಬ್ಬೂರು ಬೈಪಾಸ್‌ಗೆ ತೆರಳಲಿರುವ ಅಮಿತ್ ಶಾ, ಕೆ.ಎಲ್.ಇ ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ 1,500 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ಹಾಗೂ ನೂತನ ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಉತ್ತರ ಕರ್ನಾಟಕದ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಮೂಲಸೌಕರ್ಯ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ.
ಇದಾದ ಬಳಿಕ ಸೆಪ್ಟೆಂಬರ್ 19ರ ಸಂಜೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಇಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಒಡೆತನದ ‘ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’ಯ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಅಮಿತ್ ಶಾ ಅವರ ಈ ಭೇಟಿ ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆ ಸಚಿವ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಪ್ರಭಾವದ ಪ್ರದೇಶವಾಗಿದ್ದು, ಇತ್ತೀಚೆಗೆ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವರು ಬೆಳಗಾವಿ ಜಿಲ್ಲೆಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಇದೀಗ ಅಮಿತ್ ಶಾ ಅವರು ಯಕ್ಸಂಬಾ ಗ್ರಾಮಕ್ಕೆ ಭೇಟಿ ನೀಡಿ ಜೊಲ್ಲೆ ಕುಟುಂಬದ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆ ಬೆಳಗಾವಿ ಭಾಗದ ರಾಜಕೀಯ ಬೆಳವಣಿಗೆಗಳ ಕುರಿತು ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.
ಅಮಿತ್ ಶಾ ಅವರ ಕರ್ನಾಟಕ ಪ್ರವಾಸದ ಹಿನ್ನೆಲೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಹುಬ್ಬಳ್ಳಿ ಮತ್ತು ಬೆಳಗಾವಿ ಭಾಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಎರಡು ದಿನಗಳ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವರು ಭಾಗವಹಿಸಲಿರುವ ಕಾರ್ಯಕ್ರಮಗಳ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ.
