ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ರಕ್ಷಾಬಂಧನ ಅಥವಾ ರಾಖಿ ಹಬ್ಬವು ಒಂದು ವಿಶೇಷ ಸ್ಥಾನವನ್ನು ಪಡೆದಿದೆ. ಹಿಂದೂಗಳ ಪ್ರಮುಖ ಹಬ್ಬವಾದ ರಕ್ಷಾಬಂಧನವನ್ನು ಭಾರತದಾದ್ಯಂತ ವೈಭವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಶುಭ ದಿನದಂದು ಸಹೋದರರು ಮತ್ತು ಸಹೋದರಿಯರು ತಮ್ಮ ವಿಶೇಷ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾರೆ. ಈ ಹಬ್ಬವು ಅಣ್ಣ-ತಂಗಿಯರ ನಡುವಿನ ಪ್ರೀತಿ ಮತ್ತು ವಾತ್ಸಲ್ಯವನ್ನು ಆಚರಿಸುವ ಸಂತೋಷದ ಸಂದರ್ಭವಾಗಿದೆ.
ಈ ಪವಿತ್ರ ದಿನದಂದು ಸಹೋದರಿಯರು ಉಪವಾಸವಿರುತ್ತಾರೆ, ತಮ್ಮ ಸಹೋದರನ ಹಣೆಗೆ ತಿಲಕವಿಟ್ಟು, ಆರತಿ ಮಾಡಿ, ಅವನ ಮಣಿಕಟ್ಟಿಗೆ ‘ರಾಖಿ’ ಎಂಬ ಪವಿತ್ರ ದಾರವನ್ನು ಕಟ್ಟುತ್ತಾರೆ. ಈ ರಾಖಿಯು ಸಹೋದರ-ಸಹೋದರಿಯರ ನಡುವಿನ ಅಗಾಧ ಪ್ರೀತಿಯ ಬಂಧವನ್ನು ಸಂಕೇತಿಸುತ್ತದೆ. ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಹಬ್ಬವನ್ನು ಸಂತೋಷದಿಂದ ಆಚರಿಸಲಾಗುತ್ತದೆ. ಈ ಲೇಖನದಲ್ಲಿ ರಕ್ಷಾಬಂಧನದ ಇತಿಹಾಸ ಮತ್ತು ಮಹತ್ವವನ್ನು ವಿವರಿಸಲಾಗಿದೆ.
ರಕ್ಷಾಬಂಧನದ ಇತಿಹಾಸ
ರಕ್ಷಾಬಂಧನದ ಆರಂಭಕ್ಕೆ ಸಂಬಂಧಿಸಿದಂತೆ ಒಂದು ಪೌಪಾಲಿಕ ಕಥೆಯಿದೆ. ದೇವತೆಗಳು ಮತ್ತು ಅಸುರರ ನಡುವೆ ಹನ್ನೆರಡು ವರ್ಷಗಳ ಕಾಲ ಯುದ್ಧ ನಡೆಯಿತು. ಈ ಯುದ್ಧದಲ್ಲಿ ದೇವತೆಗಳು ಸೋತು, ಅಸುರರು ಸ್ವರ್ಗವನ್ನು ವಶಪಡಿಸಿಕೊಂಡರು. ಸೋಲಿನಿಂದ ನಿರಾಶೆಗೊಂಡ ಇಂದ್ರನು ತನ್ನ ಗುರು ಬೃಹಸ್ಪತಿಯ ಬಳಿ ಸಲಹೆಗಾಗಿ ತೆರಳಿದನು. ಇದನ್ನೆಲ್ಲ ಕೇಳುತ್ತಿದ್ದ ಇಂದ್ರನ ಪತ್ನಿ ಇಂದ್ರಾಣಿಯು, ಶ್ರಾವಣ ಶುಕ್ಲ ಪೂರ್ಣಿಮೆಯ ದಿನದಂದು ರಕ್ಷಾ ಸೂತ್ರವನ್ನು ಸಿದ್ಧಪಡಿಸಿ, ಬ್ರಾಹ್ಮಣರಿಂದ ಆಯೋಜಿತವಾದ ರಕ್ಷಾ ವಿಧಾನದ ಮೂಲಕ ಇಂದ್ರನಿಗೆ ಜಯ ಖಂಡಿತವಾಗಿ ಸಿಗುವುದೆಂದು ಭರವಸೆ ನೀಡಿದಳು.
ಮರುದಿನ, ಇಂದ್ರನು ರಕ್ಷಾ ವಿಧಾನದೊಂದಿಗೆ ರಕ್ಷಾಬಂಧನವನ್ನು ಆಚರಿಸಿದನು. ಇದಾದ ನಂತರ, ಐರಾವತ ಆನೆಯ ಮೇಲೆ ಸವಾರಿಯಾಗಿ ಯುದ್ಧಭೂಮಿಗೆ ತೆರಳಿದ ಇಂದ್ರನನ್ನು ಕಂಡು ರಾಕ್ಷಸರು ಭಯಭೀತರಾಗಿ ಓಡಿಹೋದರು. ರಕ್ಷಾ ವಿಧಾನದ ಪ್ರಭಾವದಿಂದ ಇಂದ್ರನು ವಿಜಯಶಾಲಿಯಾದನು. ಇದರಿಂದಾಗಿ ರಕ್ಷಾಬಂಧನವನ್ನು ಶ್ರಾವಣ ಪೂರ್ಣಿಮೆಯ ದಿನದಂದು ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು.
ರಕ್ಷಾ ಬಂಧನಕ್ಕೂ-ಮಹಾಭಾರತಕ್ಕೂ ಇದೆ ನಂಟು:
ರಕ್ಷಾಬಂಧನಕ್ಕೆ ಮಹಾಭಾರತದೊಂದಿಗೆ ಒಂದು ಸುಂದರವಾದ ಸಂಬಂಧವಿದೆ. ಶ್ರೀಕೃಷ್ಣ ಮತ್ತು ದ್ರೌಪದಿಯ ಸೋದರತ್ವದ ಕಥೆಯು ಈ ಹಬ್ಬದ ಮಹತ್ವವನ್ನು ಒತ್ತಿಹೇಳುತ್ತದೆ. ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸಿದ ಶ್ರೀಕೃಷ್ಣನು, ಅವನನ್ನು ವಧಿಸಲು ತನ್ನ ಸುದರ್ಶನ ಚಕ್ರವನ್ನು ಕಳುಹಿಸಿದನು. ಈ ಸಂದರ್ಭದಲ್ಲಿ ಶ್ರೀಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಸುರಿಯಿತು. ಇದನ್ನು ಕಂಡ ದ್ರೌಪದಿಯು ತಾನು ಧರಿಸಿದ್ದ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟಿದಳು.
ದ್ರೌಪದಿಯ ಈ ಕಾರ್ಯಕ್ಕೆ ಮೆಚ್ಚಿದ ಶ್ರೀಕೃಷ್ಣನು, ಆಕೆಗೆ ಏನು ಬೇಕೆಂದು ಕೇಳಿದನು. ಆಗ ದ್ರೌಪದಿಯು ತಾನು ಜೀವನವಿಡೀ ಒಳ್ಳೆಯ ಸಹೋದರಿಯಾಗಿರುವುದಾಗಿ ಹೇಳಿದಳು. ಈ ಮಾತಿಗೆ ಶ್ರೀಕೃಷ್ಣನು ದ್ರೌಪದಿಯ ಸಹೋದರನಾಗಿ ಸಂಕಷ್ಟದ ಸಮಯದಲ್ಲಿ ಆಕೆಯನ್ನು ಕಾಪಾಡುವ ಭರವಸೆಯನ್ನು ನೀಡಿದನು. ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣನು ಆಕೆಗೆ ಅಕ್ಷಯ ಸೀರೆಯನ್ನು ದಯಪಾಲಿಸಿ, ಸಹೋದರನಾಗಿ ರಕ್ಷಿಸಿದನು. ಈ ಘಟನೆಯಿಂದ ರಕ್ಷಾಬಂಧನವನ್ನು ಉತ್ತರ ಭಾರತದಲ್ಲಿ ವಿಶೇಷವಾಗಿ ರಾಖಿ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ.
ರಕ್ಷಾಬಂಧನದ ಮಹತ್ವ:
ರಕ್ಷಾಬಂಧನವು ಸಹೋದರ-ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ‘ರಕ್ಷಾ’ ಎಂದರೆ ರಕ್ಷಣೆ ಮತ್ತು ‘ಬಂಧನ’ ಎಂದರೆ ಬಂಧ. ಈ ಹಬ್ಬವು ಸಹೋದರಿಯ ರಕ್ಷಣೆಯ ಜವಾಬ್ದಾರಿಯನ್ನು ಸಹೋದರನಿಗೆ ನೀಡುತ್ತದೆ. ಸಹೋದರನು ತನ್ನ ಸಹೋದರಿಯನ್ನು ಯಾವುದೇ ಕಷ್ಟದಿಂದ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ. ಇದಕ್ಕೆ ಪ್ರತಿಯಾಗಿ, ಸಹೋದರಿಯು ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ ಮತ್ತು ರಾಖಿಯನ್ನು ಕಟ್ಟುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾಳೆ. ಉಡುಗೊರೆಗಳ ವಿನಿಮಯವು ಈ ಬಾಂಧವ್ಯವನ್ನು ಇನ್ನಷ್ಟು ಸಂತೋಷದಾಯಕವಾಗಿಸುತ್ತದೆ.
ರಕ್ಷಾಬಂಧನವು ಕೇವಲ ಸಹೋದರ-ಸಹೋದರಿಯರ ನಡುವಿನ ಸಂಬಂಧವನ್ನು ಮಾತ್ರವಲ್ಲ, ಸಮಾಜದಲ್ಲಿ ಪರಸ್ಪರ ಪ್ರೀತಿ, ಗೌರವ ಮತ್ತು ರಕ್ಷಣೆಯ ಭಾವನೆಯನ್ನು ಬೆಳೆಸುತ್ತದೆ. ಈ ಹಬ್ಬವು ಭಾರತೀಯ ಸಂಸ್ಕೃತಿಯ ಒಗ್ಗಟ್ಟಿನ ಸಂದೇಶವನ್ನು ಸಾರುತ್ತದೆ.