ಅಣ್ಣ-ತಂಗಿಯ ಪ್ರೀತಿಯ ಹಬ್ಬ: ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!

ಅಣ್ಣ ತಂಗಿಯ ಪ್ರೀತಿಯ ಹಬ್ಬ ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!

ಭಾರತೀಯ ಸಂಸ್ಕೃತಿಯ ಕೌಟುಂಬಿಕ ಹಬ್ಬಗಳಲ್ಲಿ ರಕ್ಷಾಬಂಧನಕ್ಕೆ ವಿಶೇಷ ಸ್ಥಾನವಿದೆ. ಇದು ಕೇವಲ ಒಂದು ಹಬ್ಬವಲ್ಲ, ಅಣ್ಣ-ತಂಗಿ, ಅಕ್ಕ-ತಮ್ಮಂದಿರ ನಡುವಿನ ನಿಷ್ಕಲ್ಮಶ ಪ್ರೀತಿ, ಗೌರವ ಮತ್ತು ಜನ್ಮಾಂತರದ ರಕ್ಷಣೆಯ ಭರವಸೆಯ ಪ್ರತೀಕ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ‘ರಕ್ಷಾ’ ಅಂದರೆ ರಕ್ಷಣೆ ಮತ್ತು ‘ಬಂಧನ’ ಅಂದರೆ ಕಟ್ಟುವುದು, ಅಂದರೆ ರಕ್ಷಣೆಯ ದಾರವನ್ನು ಕಟ್ಟುವುದು ಎಂಬ ಅರ್ಥವನ್ನು ಈ ಪದ ನೀಡುತ್ತದೆ.ಈ ಪವಿತ್ರ ಹಬ್ಬದ ಹಿಂದೆ ಹಲವು ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳಿವೆ. ಮಹಾಭಾರತದ ಕಥೆಯ ಪ್ರಕಾರ, ಶ್ರೀಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯ ಸೆರಗನ್ನು ಹರಿದು ಕಟ್ಟಿದಳು. ಅದಕ್ಕೆ ಪ್ರತಿಯಾಗಿ ಕೃಷ್ಣ, ದ್ರೌಪದಿಗೆ ಸದಾ ರಕ್ಷಣೆ ನೀಡುವ ಮಾತು ಕೊಟ್ಟನು. ಅದರಂತೆಯೇ ಕುರುಸಭೆಯಲ್ಲಿ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ಅಕ್ಷಯ ವಸ್ತ್ರ ನೀಡಿ ದ್ರೌಪದಿಯ ಮಾನ ಕಾಪಾಡಿದನು. ಇತಿಹಾಸದ ಪುಟದಲ್ಲಿ ನೋಡುವುದಾದರೆ, ಚಿತ್ತೋರ್ ಗಡದ ರಾಣಿ ಕರ್ಣಾವತಿಯು ತನ್ನ ರಾಜ್ಯದ ರಕ್ಷಣೆಗಾಗಿ ಮೊಘಲ್ ದೊರೆ ಹುಮಾಯೂನನಿಗೆ ರಾಖಿ ಕಳುಹಿಸಿದ್ದಳು. ಆ ರಾಖಿಗೆ ಗೌರವ ಕೊಟ್ಟು ಹುಮಾಯೂನ್ ಸೈನ್ಯ ಸಮೇತ ಧಾವಿಸಿ ಬಂದಿದ್ದನು. ಈ ಕಥೆಗಳು ರಾಖಿಯ ಪವಿತ್ರತೆಯನ್ನು ಸಾರುತ್ತವೆ.ರಕ್ಷಾಬಂಧನ ಆಚರಣೆಯ ವಿಧಾನವೇ ಅತ್ಯಂತ ಮನೋಹರ. ಹಬ್ಬದ ದಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಲಾಗುತ್ತದೆ. ತಂಗಿ ಪೂಜಾ ತಟ್ಟೆಯಲ್ಲಿ ರಾಖಿ, ಅಕ್ಷತೆ, ಕುಂಕುಮ, ದೀಪ ಮತ್ತು ಸಿಹಿತಿಂಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾಳೆ. ಮೊದಲು ದೇವರಿಗೆ ಪೂಜೆ ಸಲ್ಲಿಸಿ, ನಂತರ ಅಣ್ಣನಿಗೆ ಆರತಿ ಬೆಳಗಿ, ಆತನ ಬಲಗೈ ಮಣಿಕಟ್ಟಿಗೆ ಪ್ರೀತಿಯಿಂದ ರಾಖಿ ಕಟ್ಟುತ್ತಾಳೆ. ಅಣ್ಣನ ದೀರ್ಘಾಯುಷ್ಯ, ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಅಣ್ಣ ತಂಗಿಗೆ ಉಡುಗೊರೆ ನೀಡಿ, ಜೀವನದ ಪ್ರತಿ ಕಷ್ಟದಲ್ಲೂ ಬೆನ್ನಿಗೆ ನಿಲ್ಲುವ ಭರವಸೆ ನೀಡುತ್ತಾನೆ. ನಂತರ ಹಿರಿಯರ ಆಶೀರ್ವಾದ ಪಡೆದು ಎಲ್ಲರೂ ಒಟ್ಟಿಗೆ ಸಿಹಿ ಊಟ ಸವಿಯುತ್ತಾರೆ.ಇಂದಿನ ಆಧುನಿಕ ಕಾಲದಲ್ಲಿ ರಕ್ಷಾಬಂಧನ ಕೇವಲ ರಕ್ತಸಂಬಂಧಕ್ಕೆ ಸೀಮಿತವಾಗಿಲ್ಲ. ಜಾತಿ, ಮತ, ಧರ್ಮದ ಎಲ್ಲೆಗಳನ್ನು ಮೀರಿ ಸಹೋದರತ್ವವನ್ನು ಬೆಸೆಯುವ ಸೇತುವೆಯಾಗಿದೆ. ಶಾಲೆ, ಕಾಲೇಜು, ಕಚೇರಿಗಳಲ್ಲಿ ಸಹೋದ್ಯೋಗಿಗಳ ನಡುವೆಯೂ ರಾಖಿ ಕಟ್ಟಲಾಗುತ್ತದೆ. ಮಹಿಳೆಯರಿಗೆ ಗೌರವ ನೀಡುವ ಸಂಸ್ಕೃತಿಯನ್ನು ಇದು ಬೆಳೆಸುತ್ತದೆ. ದೂರದ ಊರುಗಳಲ್ಲಿರುವ ಬಂಧುಗಳನ್ನು ಒಂದುಗೂಡಿಸುವ ಈ ಹಬ್ಬ, ಕೌಟುಂಬಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಒಟ್ಟಿನಲ್ಲಿ ರಕ್ಷಾಬಂಧನವು ಕೇವಲ ದಾರವಲ್ಲ, ಅದು ನಂಬಿಕೆ ಮತ್ತು ನಿಸ್ವಾರ್ಥ ಪ್ರೀತಿಯ ಶಾಶ್ವತ ಸಂಕೇತ.

Exit mobile version